ಚುನಾವಣೆ ಸೌಂದರ್ಯ ಸ್ಪರ್ಧೆಯಲ್ಲ ಎಂದ ಸುಶೀಲ್ ಕುಮಾರ್ ಮೋದಿ
ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶ
ಕೊಲ್ಕತ್ತಾ, ಜ. 28: ''ಚುನಾವಣೆ ಸೌಂದರ್ಯ ಸ್ಪರ್ಧೆಯಲ್ಲ, ಜನರು ನಾಯಕರ ಹಿಂದಿನ ನಿರ್ವಹಣೆಯ ಆಧಾರದಲ್ಲಿ ಮತ ನೀಡುತ್ತಾರೆ'' ಎಂದು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಕ್ರಿಯ ರಾಜಕೀಯ ಪ್ರವೇಶ ಮಾಡಿರುವ ಪ್ರಿಯಾಂಕ ಗಾಂಧಿ ವಾದ್ರಾರನ್ನು ಟೀಕಿಸಿ ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
''ಚುನಾವಣೆ ಕುಸ್ತಿ ಪಂದ್ಯಾಟವೂ ಅಲ್ಲ ಹಾಗೂ ಸೌಂದರ್ಯ ಸ್ಪರ್ಧೆಯೂ ಅಲ್ಲ, ಅಥವಾ ಅದು ಬೇರೆ ಯಾವುದೇ ವಿಧದ ಸ್ಪರ್ಧೆಯೂ ಅಲ್ಲ'' ಎಂದು ಪಕ್ಷ ಕಾರ್ಯಕರ್ತರ ರ್ಯಾಲಿಯಲ್ಲಿ ಭಾಗವಹಿಸಲು ಹೌರಾಗೆ ಬಂದ ಸಂದರ್ಭ ಸುಶೀಲ್ ಮೋದಿ ಹೇಳಿದರು.
''ಚುನಾವಣೆ ಒಂದು ರಾಜಕೀಯ ಸ್ಪರ್ಧೆ, ಒಂದು ರಾಜಕೀಯ ಸ್ಪರ್ಧೆಯಲ್ಲಿ ಜನರು ನಿರ್ವಹಣೆಯ ಆಧಾರದಲ್ಲಿ ಮತ ಚಲಾಯಿಸುತ್ತಾರೆ'' ಎಂದು ವಿವರಿಸಿದರು.
ಪ್ರಿಯಾಂಕ ಅವರ ಸಕ್ರಿಯ ರಾಜಕೀಯ ಪ್ರವೇಶ ಸುದ್ದಿ ಹೊರಬೀಳುತ್ತಿದ್ದಂತೆಯೇ ಬಿಜೆಪಿಯು ಗಾಂಧಿ ಕುಟುಂಬದ ಮೇಲೆ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಇದು ಬಿಜೆಪಿ ಪಾಳಯದಲ್ಲಿರುವ ಆತಂಕವನ್ನು ಸೂಚಿಸುತ್ತದೆ ಎಂದಿದೆ.
''ಗಾಂಧಿ ಕುಟುಂಬದ ವಿರುದ್ಧದ ನಿಂದನೆಗಳಿಂದ ಬಿಜೆಪಿಗೆ ಅವರ ಬಗ್ಗೆ ಭಯ ಇರುವುದು ಸ್ಪಷ್ಟ. ಈ ಕುಟುಂಬ ಭಾರತೀಯ ರಾಜಕಾರಣದ ಪಥವನ್ನು ತಲೆಕೆಳಗಾಗಿಸಬಹುದೆಂದು ಅವರಿಗೆ ಗೊತ್ತು. ಇದೇ ಭಯದಿಂದ ಅವರು ಎಲ್ಲಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ'' ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆ.