'ರಾಜೀನಾಮೆ ನೀಡಲು ಸಿದ್ಧ' ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಫೈಲ್ ಚಿತ್ರ
ಮೈಸೂರು,ಜ.28: ನಮ್ಮ ಶಾಸಕರುಗಳನ್ನು ನಾವೇ ಕಂಟ್ರೋಲ್ ಮಾಡಬೇಕು. ಇನ್ನೇನು ಜೆಡಿಎಸ್ ನವರು ಕಂಟ್ರೋಲ್ ಮಾಡಲು ಆಗುತ್ತಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಸೋಮವಾರ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕಾರಿನಲ್ಲಿ ಬರುತ್ತಿದ್ದೆ. ಈ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ. ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನೀವೇ ಗೊಂದಲ ಸೃಷ್ಟಿಸುತ್ತಿದ್ದೀರಿ. ಒಬ್ಬೊಬ್ಬರ ಬಳಿ ಒಂದೊಂದು ಹೇಳಿಕೆ ಪಡೆದು ಗೊಂದಲ ಸೃಷ್ಟಿಸುತ್ತಿದ್ದೀರಿ. ಪದೇ ಪದೇ ಅದನ್ನು ಕೇಳಬೇಡಿ. ಇದಕ್ಕೆ ಈಗಾಗಲೇ ಉತ್ತರ ನೀಡಿ ಆಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನಾವು ಮೈತ್ರಿ ಸರ್ಕಾರ ರಚಿಸಿದ್ದೇವೆ. ಜೆಡಿಎಸ್ ಅವರೇ ಸಿಎಂ ಆಗಲಿ ಎಂದಿದ್ದೇವೆ. ಹೀಗಾಗಿ ನಾನು ಸಿಎಂ ಆಗುವ ಪ್ರಶ್ನೆ ಎಲ್ಲೂ ಉದ್ಭವ ಆಗಲ್ಲ. ನಾನು ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಎಸ್.ಟಿ.ಸೋಮಶೇಖರ್ ಗೆ ಕೆಪಿಸಿಸಿಯಿಂದ ನೋಟಿಸ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲರ ಜೊತೆ ಮಾತನಾಡಿ ಪ್ರತಿಕ್ರಿಯಿಸುತ್ತೇನೆ ಎಂದರು.





