ಬೆಂಗರೆಯಲ್ಲಿ ಡಬ್ಲುಪಿಐ ಸಮಾವೇಶ

ಮಂಗಳೂರು, ಜ.28: ಬಿಜೆಪಿ ಪಕ್ಷ ದೇಶದಲ್ಲಿ ಕೋಮುರಾಜಕೀಯ ನಡೆಸುತ್ತಿರುವಾಗ ಕಾಂಗ್ರೆಸ್ ಅಲ್ಪಸಂಖ್ಯಾತರ ವೋಟ್‌ಬ್ಯಾಂಕ್ ಮಾಡುವಾಗ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ದಮನಿತರ, ಮರ್ದಿತರ, ಹಕ್ಕು ವಂಚಿಸಲ್ಪಟ್ಟವರ, ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಹೋರಾಟವನ್ನು ಕೈಗೊಂಡು ಮೌಲ್ಯಾಧಾರಿತ ರಾಜಕೀಯವನ್ನು ದೇಶಕ್ಕೆ ತೋರಿಸಿ ಕೊಡುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ ಹಾಗೂ ಎಫ್‌ಐಟಿಯು ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಪಾಲೇರಿ ಹೇಳಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿಯು ರವಿವಾರ ಬೆಂಗರೆಯಲ್ಲಿ ಏರ್ಪಡಿಸಿದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ಬೆಂಗರೆ ಘಟಕದ ಮುಖಂಡ ಫೈಝಲ್ ಬಿನ್ ಇಸ್ಮಾಯೀಲ್ ಮಾತಾಡಿದರು.
ಈ ಸಂದರ್ಭ ಪಕ್ಷಕ್ಕೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಮೊಹಿನುದ್ದೀನ್ ಖಮರ್, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫ್ರಾಝ್ ಅಡ್ವಕೇಟ್ ಉಪಸ್ಥಿತರಿದ್ದರು.





