ಸಾಲ ಮನ್ನಾ ವಿಚಾರದಲ್ಲಿ ಸಿಎಂ ಪುಕ್ಕಟೆ ಪ್ರಚಾರ: ಪುಟ್ಟಸ್ವಾಮಿ
ಮಂಗಳೂರು, ಜ.28: ಬೆಳೆ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ವಾಸ್ತವದಲ್ಲಿ ಅಷ್ಟೊಂದು ಮೊತ್ತದ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯಾಧ್ಯಕ್ಷ ಬಿ.ಜಿ. ಪುಟ್ಟಸ್ವಾಮಿ ಹೇಳಿದ್ದಾರೆ.
ಸೋಮವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಜೆಟ್ 2.18 ಸಾವಿರ ಕೋ.ರೂ. ಇರುವಾಗ, ಸಾಲ ಕೂಡ 2.92 ಸಾವಿರ ಕೋಟಿ ರೂ. ಇದೆ. ಹೀಗಿರುವಾಗ ಸಾಲ ಮನ್ನಾಕ್ಕೆ ಮೊತ್ತವನ್ನು ಹೇಗೆ ಹೊಂದಾಣಿಕೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಬಡವರ ಬಂಧು ಯೋಜನೆ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವುದಾಗಿ ಸರಕಾರ ಪ್ರಕಟಿಸಿದೆ. ದೇವರಾಜ ಅರಸು ಮುಖ್ಯಮಂತ್ರಿ ಯಾಗಿದ್ದಾಗ ನೇರವಾಗಿ ಸರಕಾರದಿಂದಲೇ ಬಡವರಿಗೆ ಸಾಲ ಯೋಜನೆ ಜಾರಿಗೊಳಿಸಿದ್ದರು. ಆದರೆ ಈಗ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವಂತೆ ಸರಕಾರ ಬ್ಯಾಂಕ್‌ಗಳಿಗೆ ಒತ್ತಡ ಹಾಕುತ್ತಿದೆ. ಬ್ಯಾಂಕ್‌ಗಳು ಗ್ಯಾರಂಟಿ ಪತ್ರ ಇಲ್ಲದೆ ಸಾಲ ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಯಾವುದೇ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡಲು ಸಾಧ್ಯವಾಗಿಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಹಿಂದುಳಿದ ವರ್ಗಕ್ಕೂ ಅಗತ್ಯ ಸ್ಥಾನಗಳು ದೊರಕಲಿವೆ. ಗೆಲ್ಲುವ ಹಾಗೂ ಇತರೆ ಮಾನದಂಡವನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಕ್ಕೆ ಸೀಟು ನೀಡುವ ಬಗ್ಗೆ ಸಮೀಕ್ಷೆ ನಡೆಸಿ ಬಿಜೆಪಿ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು ಎಂದು ಪುಟ್ಟಸ್ವಾಮಿ ಹೇಳಿದರು.
ಕೇಂದ್ರ ಸರಕಾರದ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎನ್ನುವ ಅಜೆಂಡಾದೊಂದಿಗೆ ಜನತೆಯ ಬಳಿಗೆ ತೆರಳಲಾಗುವುದು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ರವಿಚಂದ್ರ, ದ.ಕ. ಜಿಲ್ಲಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಮಂಗಳೂರು ತಾಲೂಕು ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು.







