ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಪ್ರಾರ್ಥನೆ ವಿರುದ್ಧ ಮನವಿ ಪಂಚ ಸದಸ್ಯ ಪೀಠಕ್ಕೆ

ಹೊಸದಿಲ್ಲಿ,ಜ.28: ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರತಿದಿನ ಸಂಸ್ಕೃತ ಪ್ರಾರ್ಥನೆ ನಡೆಸುವುದನ್ನು ವಿರೋಧಿಸಿ ಹಾಕಲಾಗಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ಐದು ಸದಸ್ಯರ ನ್ಯಾಯಪೀಠಕ್ಕೆ ಒಪ್ಪಿಸಿದೆ. ಈ ವಿದ್ಯಾಲಯಗಳಲ್ಲಿ ಪ್ರತಿದಿನ ಅಸತೋಮಾ ಸದ್ಗಮಯ ಎಂಬ ಸಂಸ್ಕೃತ ಪ್ರಾರ್ಥನೆಯನ್ನು ಹಾಡುವುದನ್ನು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಮನವಿಯು ವಿಧಿ 28(1)ನ ಸರಿಯಾದ ವ್ಯಾಖ್ಯಾನದ ಪ್ರಾಮುಖ್ಯತೆಯನ್ನು ಪ್ರಶ್ನಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಸಂವಿಧಾನದ ವಿಧಿ 28(1)ರಲ್ಲಿ, ಸರಕಾರಿ ನಿಧಿಯಿಂದ ನಿರ್ವಹಿಸಲ್ಪಡುವ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಸೂಚನೆಗಳನ್ನು ನೀಡಬಾರದು ಎಂದು ತಿಳಿಸಲಾಗಿದೆ. ಮನವಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಎಫ್ ನರಿಮನ್ ನೇತೃತ್ವದ ಪೀಠ, ಈ ವಿಷಯವನ್ನು ಸೂಕ್ತ ಪೀಠದಿಂದ ವಿಚಾರಣೆ ನಡೆಸುವ ಸಲುವಾಗಿ ಭಾರತೀಯ ಮುಖ್ಯ ನ್ಯಾಯಾಧೀಶರ ಮುಂದಿಡುವ ಅಗತ್ಯವಿದೆ ಎಂದು ತಿಳಿಸಿದೆ. ಈ ಪ್ರಾರ್ಥನೆಯು ಧಾರ್ಮಿಕ ಹಿನ್ನೆಲೆಯನ್ನು ಹೊಂದಿಲ್ಲ ಬದಲಿಗೆ ಇದು ಸ್ವಭಾವತಃ ಜಾತ್ಯತೀತವಾಗಿದೆ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ತಿಳಿಸಿದ್ದಾರೆ. ಈ ಪ್ರಾರ್ಥನೆಯ ಅರ್ಥ ನನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಿರಿ ಎಂಬುದಷ್ಟೇ ಆಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಸಾಲುಗಳನ್ನು ಉಪನಿಷದ್‌ನಿಂದ ಪಡೆಯಲಾಗಿದೆ ಎಂದು ನ್ಯಾಯಾಧೀಶ ನರಿಮನ್ ತಿಳಿಸಿದಾಗ ಪ್ರತಿಕ್ರಿಯಿಸಿದ ಮೆಹ್ತಾ, ನ್ಯಾಯಾಲಯದ ಕೋಣೆಯಲ್ಲಿ ಬರೆಯಲಾಗಿರುವ ಯತೊ ಧರ್ಮ ತಥೋ ಜಯ ಎಂಬ ಸಾಲುಗಳೂ ಸಂಸ್ಕೃತವಾಗಿದ್ದು ಮಹಾಭಾರತದಿಂದ ಪಡೆಯಲಾಗಿದೆ. ಇದರರ್ಥ ನ್ಯಾಯ ಇದ್ದಲ್ಲಿ ಗೆಲುವು ಇರುತ್ತದೆ ಎಂದಾಗಿದೆ ಎಂದು ತಿಳಿಸಿದ್ದಾರೆ.





