ಅತ್ತೂರು ವಾರ್ಷಿಕ ಮಹೋತ್ಸವ: ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ

ಕಾರ್ಕಳ, ಜ.28: ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಎರಡನೆಯ ದಿನವಾದ ಸೋಮವಾರ ರೋಗಿಗಳಿಗಾಗಿ ಹಾಗೂ ವಿವಿಧ ರೀತಿಯ ಕಷ್ಟಗಳಿಗೆ ಒಳಗಾದವರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಬೆಳಗ್ಗಿನ ಪೂಜೆಗಳನ್ನು ವಂ.ಹೆನ್ರಿ ಮಸ್ಕರೇನಸ್ ಮತ್ತು ವಂ.ಅಲೆಕ್ಸಾಂಡರ್ ಲುವಿಸ್ ನೆರವೇರಿಸಿದರು. ಮುಲ್ಕಿ ಡಿವೈನ್ ಸೆಂಟರ್‌ನ ವಂ.ಅಬ್ರಹಾಮ್ ಡಿಸೋಜ ರೋಗಿಷ್ಠರಿಗಾಗಿ ವಿಶೇಷ ಬಲಿಪೂಜೆಯನ್ನು ನೆರವೇರಿಸಿ ಪ್ರಾರ್ಥಿಸಿ ದರು. ಉಡುಪಿಯ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಹೋತ್ಸವದ ವಿವಿಧ ಕಾರ್ಯಗಳಲ್ಲಿ ಸಹಕರಿಸಿದರು.
ರೋಗಿಗಳಿಗಾಗಿ ಅಪರಾಹ್ನದ ಪೂಜೆಯನ್ನು ನೆರವೇರಿಸಿದ ಗುಲ್ಬರ್ಗದ ಧರ್ಮಾಧ್ಯಕ್ಷ ಅ.ವಂ.ಡಾ.ರಾಬರ್ಟ್ ಮಿರಾಂದ ಪ್ರವಚನ ನೀಡಿದರು. ಏಕೈಕ ಕನ್ನಡ ಭಾಷೆಯ ಬಲಿಪೂಜೆಯನ್ನು ಶಿವಮೊಗ್ಗದ ವಂ.ವೀನಸ್ ಪ್ರವೀಣ್ ನೆರವೇರಿಸಿದರು. ಸಹಸ್ರಾರು ಸಂಖ್ಯೆಯ ಭಕ್ತರು ವುಹೋತ್ಸವದಲ್ಲಿ ಪಾಲ್ಗೊಂಡಿ ದ್ದರು.
ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಹಲವು ಬಲಿಪೂಜೆ ಗಳು ನಡೆಯಲಿವೆ. ಬೆಳಗ್ಗೆ ಕನ್ನಡ ಬಲಿಪೂಜೆಯನ್ನು ಬೆಂಗಳೂರಿನ ಕ್ರಾಸ್ ಸಂಸ್ಥೆಯ ವಂ.ಫಾವುಸ್ಟಿನ್ ಲೋಬೊ ಹಾಗು ಸಂಜೆಯ ಬಲಿಪೂಜೆಯನ್ನು ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಅ.ವಂ.ಡಾ.ಪೀಟರ್ ಮಚಾಡೊ ನೆರ ವೇರಿಸಲಿರುವರು.







