ಮಣೂರು ಜೋಡಿ ಕೊಲೆ ಪ್ರಕರಣ: ಮುಂದುವರೆದ ಪೊಲೀಸ್ ತನಿಖೆ

ಕೋಟ, ಜ.28: ಮಣೂರು ಗ್ರಾಮ ಚಿಕ್ಕನಕೆರೆ ಜ.26ರಂದು ತಡರಾತ್ರಿ ನಡೆದ ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ವೃತ್ತ ನಿರೀಕ್ಷಕ ಸುದರ್ಶನ್, ಡಿಸಿಐಬಿ ಪೊಲೀಸ್ ನಿರೀಕ್ಷಕ ಕಿರಣ್ ಅವರ ತಂಡಗಳನ್ನು ರಚಿಸಲಾಗಿದೆ.
ಈ ನಾಲ್ಕು ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಅದಕ್ಕಾಗಿ ಬೇರೆ ಬೇರೆ ಪ್ರದೇಶಗಳಿಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಹಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಕಲೆ ಹಾಕ ಲಾಗುತ್ತಿದೆ. ಆದರೆ ಈವರೆಗೆ ಯಾರನ್ನು ಕೂಡ ವಶಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಜ.26ರಂದು ರಾತ್ರಿ 11 ಗಂಟೆ ಸುಮಾರಿಗೆ ಶೌಚಾಲಯ ಹೊಂಡದ ವಿಚಾರಕ್ಕೆ ಸಂಬಂಧಿಸಿದ ದ್ವೇಷದಲ್ಲಿ ಏಳು ಮಂದಿಯ ತಂಡ ಕೋಟತಟ್ಟು ವಿನ ಭರತ್(30) ಹಾಗೂ ಯತೀಶ್ ಕಾಂಚನ್(25) ಎಂಬವರನ್ನು ತಲ ವಾರಿನಿಂದ ಕೊಚ್ಚಿ ಭೀಕರವಾಗಿ ಕೊಲೆಗೈದು ಪರಾರಿಯಾಗಿತ್ತು.
ಚಿಕ್ಕನಕೆರೆ ಲೋಹಿತ್ ಪೂಜಾರಿ ಹಾಗೂ ನೆರೆಮನೆಯ ರಾಜಶೇಖರ ರೆಡ್ಡಿ ಮಧ್ಯೆ ಶೌಚಾಲಯದ ಹೊಂಡಕ್ಕೆ ಸಂಬಂಧಿಸಿ ತಗಾದೆ ಉಂಟಾಗಿತ್ತು.
ಈ ವಿಚಾರದಲ್ಲಿ ಲೋಹಿತ್ ಪರ ವಹಿಸಲು ತೆರಳಿದ್ದ ಗೆಳೆಯ ಭರತ್ ಹಾಗೂ ಆತನ ಗೆಳೆಯ ಯತೀಶ್ ಕೊಲೆಗೀಡಾಗಿದ್ದಾರೆ.
ಈ ಕೊಲೆಗೆ ಇದೊಂದೇ ಕಾರಣ ಅಲ್ಲ. ಬೇರೆ ಕಾರಣಗಳಿರಬಹುದೆಂಬ ಶಂಕೆಯನ್ನು ಮೃತರ ಗೆಳೆಯರು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಆರೋಪಿಗಳು ಕೊಲೆ ನಡೆಸಲು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಬಂದಿದ್ದರು. ಹಾಗಾಗಿ ಇದು ಯೋಜಿತ ಕೊಲೆ ಎಂಬುದು ಅವರ ಆರೋಪವಾಗಿದೆ. ಇದರಲ್ಲಿ ಸ್ಥಳೀಯ ಯುವಕ ಕೂಡ ಭಾಗಿಯಾಗಿರುವ ಬಗ್ಗೆ ದೂರಲಾಗಿದೆ.
ರಾಜಶೇಖರ ರೆಡ್ಡಿ ಮೂಲತಃ ಆಂದ್ರಪ್ರದೇಶದವರಾಗಿದ್ದು, ಹಲವು ವರ್ಷ ಗಳಿಂದ ಮಣೂರಿನಲ್ಲಿ ನೆಲೆಸಿದ್ದರು. ಇವರ ಸಹೋದರ ರೌಡಿ ಶೀಟರ್ ಆಗಿರುವ ಹರೀಶ್ ರೆಡ್ಡಿ ಬಗ್ಗೆ ಎಫ್‌ಐಆರ್‌ನಲ್ಲಿ ಹೆಸರು ದಾಖಲಾಗದಿದ್ದರೂ ಈ ಕೊಲೆಗೆ ಆತನೇ ಸುಪಾರಿ ನೀಡಿದ್ದ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡಗಳು ತನಿಖೆ ಮುಂದುವರೆಸಿದ್ದು, ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನು ಕೂಡ ಬಂಧಿಸಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.







