ಲಂಚಕ್ಕೆ ಬೇಡಿಕೆ ಆರೋಪ: ಬಿಬಿಎಂಪಿ ನೌಕರ ಎಸಿಬಿ ಬಲೆಗೆ

ಬೆಂಗಳೂರು, ಜ.28: ನಿವೇಶನವೊಂದರ ಖಾತಾ ನೀಡಲು ಅರ್ಜಿದಾರರಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದಡಿ ಬಿಬಿಎಂಪಿ ನೌಕರರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಯಲಹಂಕ ಉಪನಗರದ ಎಆರ್‌ಒ ಕಚೇರಿಯ ವಿಷಯ ನಿರ್ವಾಹಕ ಕಾಂತರಾಜು ಎಂಬುವರ ವಿರುದ್ಧ ಎಸಿಬಿ ದೂರು ದಾಖಲಿಸಿಕೊಂಡಿದೆ.
ನಗರದ ಅಟ್ಟೂರು ಲೇಔಟ್ ನಿವಾಸಿಯೊಬ್ಬರು ತಮ್ಮ ನಿವೇಶನದ ಖಾತಾ ಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಆರೋಪಿ ಕಾಂತರಾಜು, 15 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.
ಸೋಮವಾರ ಪ್ರಕರಣ ಸಂಬಂಧ ದಾಳಿ ನಡೆಸಿದ ಎಸಿಬಿ ತನಿಖಾಧಿಕಾರಿಗಳು, ಕಾಂತರಾಜು ಅನ್ನು ವಶಕ್ಕೆ ಪಡೆದು, ನಗರ ಎಸಿಬಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
Next Story





