ಯುವ ಸಮುದಾಯ ಅಕ್ಷರ ಸಂಸ್ಕೃತಿಯಿಂದ ದೂರವಾಗುತ್ತಿದೆ: ಪ್ರೊ.ನಿಸಾರ್ ಅಹಮದ್

ಬೆಂಗಳೂರು, ಜ.28: ಆಧುನಿಕ ಕಾಲಘಟ್ಟದಲ್ಲಿ ಯುವ ಸಮುದಾಯ ಅಕ್ಷರ ಸಂಸ್ಕೃತಿಯಿಂದ ದೂರ ಉಳಿಯುತ್ತಿದೆ. ಅಕ್ಷರ ಸಂಸ್ಕೃತಿಯಿಂದ ನಮ್ಮ ನಾಡಿನಲ್ಲಿ ಅನೇಕ ಮಹಾತ್ಮರು ರೂಪಗೊಂಡಿದ್ದಾರೆ ಎಂದು ನಿತ್ಯೋತ್ಸವ ಕವಿ ಹಾಗೂ ಪದ್ಮಶ್ರೀ ಪುರಸ್ಕೃತ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅಭಿಪ್ರಾಯಿಸಿದ್ದಾರೆ.
ಸೋಮವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಹಾಗೂ 2017 ನೆ ಸಾಲಿನ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಲಿಪಿ ವಿಶ್ವದಲ್ಲೇ ಅತಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಕನ್ನಡದ ಅಕ್ಷರ ಲೋಕದಲ್ಲಿ ಇಡೀ ವಿಶ್ವವೇ ನಮ್ಮನ್ನು ನೋಡುವಂತೆ ಮಾಡಿದ ಮಹಾತ್ಮರು ಹಲವರಿದ್ದಾರೆ. ಆದರೆ, ಆಧುನಿಕತೆಯಲ್ಲಿ ಯುವ ಜನತೆ ಸೇರಿ ಎಲ್ಲರೂ ಕಂಪ್ಯೂಟರ್, ಟಿವಿ, ಮೊಬೈಲ್, ತಂತ್ರಜ್ಞಾನದಲ್ಲಿ ಮುಳುಗಿದ್ದು, ಅಕ್ಷರ ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಸಾಹಿತ್ಯಕ್ಕೆ ಮಾತ್ರವಲ್ಲದೇ ವಿಜ್ಞಾನ ಸೇರಿ ಇತರೆ ಆಯಾಮದಲ್ಲಿ ಪ್ರಶಸ್ತಿ ನೀಡಿದೆ. ಕೃಷ್ಣಮೂರ್ತಿ ಚೆನ್ನಾಗಿ ಪುಸ್ತಕ ವಿನ್ಯಾಸ ಮಾಡುತ್ತಾರೆ. ಸಮಾರಂಭವನ್ನು ವಸುಂಧರಾ ಭೂಪತಿ ಅಚ್ಚುಕಟ್ಟಾಗಿ ಹಮ್ಮಿಕೊಂಡಿದ್ದಾರೆ. ವೈಜ್ಞಾನಿಕ, ತಾಂತ್ರಿಕತೆ ಪುಸ್ತಕದ ಮೇಲೆ ಪ್ರಭಾವ ಬೀರಿದ್ದರಿಂದ ಪುಸ್ತಕ ಅತ್ಯುತ್ತಮವಾಗಿ ಮೂಡಿಬರುತ್ತಿವೆ. ಮುದ್ರಕರು ಹಿಂದೆ ಉಳಿಯುತ್ತಿದ್ದರು. ಪ್ರಾಧಿಕಾರ ಅವರ ಶ್ರಮ ಗುರುತಿಸಿ ಪ್ರಶಸ್ತಿ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಭಾಷಾ ಭಾರತಿ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಅಲ್ಲದೆ, ಶೇ.50 ರಷ್ಟು ರಿಯಾಯತಿಯನ್ನೂ ನೀಡಲಾಗುತ್ತಿದೆ. ಆದರೆ, ಕೆಲವೊಂದು ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಉಚಿತವಾಗಿ ಪುಸ್ತಕಗಳನ್ನು ನೀಡಿ ಎನ್ನುತ್ತಿರುವುದು ಖೇದಕರ ಎಂದು ನುಡಿದರು.
ರಾಜ್ಯದ ಹಲವು ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಾರ್ಷಿಕವಾಗಿ ಕೋಟ್ಯಂತರ ಮೊತ್ತದ ಬಜೆಟ್ ಮಾಡುತ್ತವೆ. ಆದರೆ, ಪುಸ್ತಕಗಳನ್ನು ಖರೀದಿಸುವ ಗೋಜಿಗೆ ಹೋಗುವುದಿಲ್ಲ ಎಂದ ಅವರು, ಸಂಘ ಸಂಸ್ಥೆಗಳು ಹಾಗೂ ವಿವಿಗಳು ಹೆಚ್ಚು ಪುಸ್ತಕ ಖರೀದಿ ಮಾಡುವ ಮನಸ್ಸು ಮಾಡಬೇಕು. ಆ ಮೂಲಕ ಸರಕಾರಿ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಾಶಕರು, ಲೇಖಕರಿಗೆ ಸೇತುವೆಯಾಗಿದೆ. 542 ಪುಸ್ತಕ ಮುದ್ರಣ ಮಾಡಲಾಗಿದ್ದು, ಮಾರಾಟಕ್ಕೆ ಲಭ್ಯವಿದೆ. ಚೊಚ್ಚಲ ಪುಸ್ತಕ ಪ್ರಶಸ್ತಿ, ಆನ್‌ಲೈನ್ ಪುಸ್ತಕ ಮತ್ತು ಲೇಖಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆಯ್ದ ಶಾಲೆ ಕಾಲೇಜುಗಳು ಮತ್ತು ಹೊರ ನಾಡಿನ ಶಾಲೆಗಳಿಗೆ ಪುಸ್ತಕ ವಿತರಣೆ, ಮಕ್ಕಳಿಗೆ ವಿಚಾರ ಸಂಕಿರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಾರ್ಷಿಕ ಬಹುಮಾನ: ವಿಶ್ವನಾಥ್ ಸುವರ್ಣ ಅವರ ‘ಕರುನಾಡ ಕೋಟೆಗಳ ಸುವರ್ಣ ನೋಟ’ ಪುಸ್ತಕಕ್ಕೆ ಪುಸ್ತಕ ಸೊಗಸು ಮೊದಲ ಬಹುಮಾನ, ಡಾ. ಎಸ್.ಗುರುಮೂರ್ತಿ ಅವರ ‘ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್’ ಪುಸ್ತಕಕ್ಕೆ ಎರಡನೇ ಬಹುಮಾನ, ಡಾ. ಚನ್ನವೀರೇಗೌಡ ಅವರ ‘ಬಾಬಾ ಸಾಹೇಬರೆಡೆಗೆ ಖರ್ಗೆ ಜೀವನ ಕಥನ’ಕ್ಕೆ ಮೂರನೇ ಬಹುಮಾನ, ಬಾಗೂರು ಮಾರ್ಕಂಡೇಯ ಅವರ ‘ಪುಟ್ಟಿಯ ಗಿರಗಟ್ಲೆ’ ಪುಸ್ತಕಕ್ಕೆ ಮಕ್ಕಳ ಪುಸ್ತಕ ಸೊಗಸು ಬಹುಮಾನ ನೀಡಲಾಯಿತು.
ಸ್ವಾನ್ ಪ್ರಿಂಟರ್ಸ್‌ನ ಎಂ.ಕೃಷ್ಣಮೂರ್ತಿ ಅವರಿಗೆ ಡಾ.ಶಿವಮೂರ್ತಿ ಮುರುಘಾ ಶರಣರ ಸಂಪಾದನೆಯ ವಚನ ಮಾರ್ಗ ಕೃತಿಗೆ ಮುದ್ರಣ ಸೊಗಸು ಬಹುಮಾನ, ಕಾದಂಬಿನಿ ಅವರ ಹಲಗೆ ಮತ್ತು ಮೆದುಬೆರಳು ಕೃತಿಗೆ ಕಲಾವಿದ ಗಿರಿಧರ ಕಾರ್ಕಳ ಅವರಿಗೆ ಮುಖಪುಟ ಚಿತ್ರಕಲೆ ಬಹುಮಾನ ಹಾಗೂ ಡಾ.ಎಚ್.ಎಸ್.ಅನುಪಮಾ ಅವರ ಕರಿ ಕಣಗಿಲ ಕೃತಿಗೆ ಅರುಣ್‌ಕುಮಾರ್ ಹಾಗೂ ಡಾ.ಕೃಷ್ಣ ಗಿಳಿಯಾರ್‌ಗೆ ಮುಖಪುಟ ಚಿತ್ರ ವಿನ್ಯಾಸ ಬಹುಮಾನ ನೀಡಲಾಯಿತು.
2017ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಜಯದೇವ ಮೈ ಮೆಣಸಗಿ ಅವರಿಗೆ, ಷ.ಶೆಟ್ಟರ್‌ಗೆ ‘ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’, ನ.ರವಿಕುಮಾರ್ ಅವರಿಗೆ ‘ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’, ಡಾ. ಎಚ್.ಗಿರಿಜಮ್ಮ ಅವರಿಗೆ ‘ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.







