ಕಡಂಬುವಿನಲ್ಲಿ ಗುಂಪು ಘರ್ಷಣೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಪಿಎಫ್‍ಐ ಆಗ್ರಹ
ಬಂಟ್ವಾಳ, ಜ. 28: ವಿಟ್ಲ ಸಮೀಪದ ಕಡಂಬುವಿನಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು, ಇದನ್ನು ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಸಮಿತಿ ಖಂಡಿಸಿದೆ.
ಸಂಘಪರಿವಾರದ ಕಾರ್ಯಕರ್ತರು ಗೋವಿನ ವಿಚಾರವನ್ನು ಮುಂದಿಟ್ಟುಕೊಂಡು ಕಡಂಬು ಪ್ರದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಿ ಗಲಾಟೆ ನಡೆಸಲು ಪ್ರಯತ್ನಿಸಿರುವುದಾಗಿ ಸ್ಥಳೀಯ ಯುವಕರು ತಿಳಿಸಿದ್ದು, ಈ ಸಂಧರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡ ಯುವಕರನ್ನು ಸ್ಥಳೀಯ ಪಿಎಫ್‍ಐ ಕಾರ್ಯಕರ್ತ ಅಬ್ದುಲ್ ಅಝೀಝ್ ಎಂಬವರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಿಂದ ಹಿಂದಿರುಗಿ ಬರುವಾಗ ಪೊಲೀಸರು ಅಮಾಯಕ ಅಝೀಝ್‍ರನ್ನು ಬಂಧಿಸಿ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದಾರೆ.
ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣ ಸಂಘ ಪರಿವಾರ. ಸ್ಥಳೀಯವಾಗಿ ದಕ್ಷ ಪೊಲೀಸ್ ಅಧಿಕಾರಿ ಎಂಬ ವಿಶ್ವಾಸ ಗಳಿಸಿದ್ದ ಅಧಿಕಾರಿಗಳೇ ಒತ್ತಡಕ್ಕೆ ಮಣಿದು ಪೂರ್ವಾಗ್ರಹ ಪೀಡಿತರಾಗಿ ಅಮಾಯಕರನ್ನು ಬಂಧಿಸಿರುವುದು ಖಂಡನೀಯ. ಆದ್ದರಿಂದ ತಕ್ಷಣ ಉನ್ನತ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪಿಎಫ್‍ಐ ಬಂಟ್ವಾಳ ತಾಲೂಕು ಸಮಿತಿ ಆಗ್ರಹಿಸಿದೆ.





