ಫೆಬ್ರವರಿಯಲ್ಲಿ ಆರೋಗ್ಯಮೇಳ: ಪುತ್ತಿಗೆ ಗ್ರಾಮ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ

ಮೂಡುಬಿದಿರೆ, ಜ. 28: ಆಯುಷ್ಮಾನ್ಮುಭವ ಯೋಜನೆಯನ್ನು ಪ್ರಧಾನಿ ಮೋದಿಯವರು ಜಾರಿಗೊಳಿಸಿದ್ದು, ದೇಶದ ಜನರಿಗೆ ಇದು ಫಲಪ್ರದವಾಗಿದೆ. ಈ ದಿಶೆಯಲ್ಲಿ ಮೂಡುಬಿದಿರೆಯಲ್ಲಿ ಬೃಹತ್ ಆರೋಗ್ಯಮೇಳವನ್ನು ಫೆಬ್ರವರಿಯಲ್ಲಿ ಆಯೋಜಿಸುವ ಚಿಂತನೆ ನಡೆಸಿದ್ದೇವೆ. ಅರೋಗ್ಯ ತಪಾಸಣೆ ಮಾತ್ರವಲ್ಲದೆ, ಅವಶ್ಯವಿರುವವರಿಗೆ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಸಂಪಿಗೆ ಜಂಕ್ಷನ್‍ನಲ್ಲಿ ನಡೆದ ಪುತ್ತಿಗೆ ಗ್ರಾ.ಪಂ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಗ್ಯಾಸ್‍ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮಸಭೆಗಳಲ್ಲಿ ಚರ್ಚೆಯು ಸ್ಪರ್ಧೆಯಾಗಬಾರದು, ಅದರ ಬದಲು ಗ್ರಾಮದ ನೈಜ್ಯ ಸಮಸ್ಯೆ, ಅಹವಾಲನ್ನು ತಿಳಿಸುವ ಸಭೆಯಾಗಬೇಕು. ಪ್ರತಿಷ್ಠೆಗೋಸ್ಕರ ಚರ್ಚೆ ಮಾಡುವುದಕ್ಕಿಂತ, ಗ್ರಾಮದ ಅಭಿವೃದ್ಧಿಗೋಸ್ಕರ ಚರ್ಚೆ ಮಾಡುವಂತಾಗಬೇಕು ಎಂದರು.
ಕಲ್ಲಮುಂಡ್ಕೂರು-ಪುತ್ತಿಗೆ ಗ್ರಾಮ ಪಂಚಾಯಿತಿ ಗಡಿಪ್ರದೇಶವಾಗಿರುವ ಪೊಯ್ಯಡಿಯಲ್ಲಿ ನೆಡಬೇಕಾದ ಗಿಡಗಳು ಬಿಸಾಡಿದ ರೀತಿಯಲ್ಲಿವೆ. ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಪಂಚಾಯಿತಿ ಸದಸ್ಯ ನಾಗವರ್ಮ ಜೈನ್ ಸಭೆಯ ಗಮನಕ್ಕೆ ತಂದರು.
ಪೊಯ್ಯಡಿಯಲ್ಲಿ ಗಿಡ ನೆಡುವ ಯೋಜನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದು ಮಂಗಳೂರಿನ ಸೋಶಿಯಲ್ ಫಾರೆಸ್ಟ್ ಯೋಜನೆಯಾಗಿರುತ್ತದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಪತ್ರ ಮುಖೇನ ಪಂಚಾಯಿತಿ ಕೂಡ ಸೋಶಿಯಲ್ ಫಾರೆಸ್ಟ್‍ನವರ ಗಮನಸೆಳೆಯಬಹುದು ಎಂದು ಅರಣ್ಯ ಪಾಲಕ ಶಂಕರ್ ಎಂದು ಸಲಹೆ ನೀಡಿದರು.
ಪಂಚಾಯಿತಿ ಪೆಲತ್ತಡ್ಕ-ಎರುಗುಂಡಿ ರಸ್ತೆ ದುರವಸ್ಥೆ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಜಾಗವಿರುವ ಕಾರಣ ಸೂಕ್ತ ಮಾಡಲು ಸಾಧ್ಯವಾಗಿಲ್ಲ. ಗ್ರಾಮಕರಣಿಕ ಜೊತೆ ಹೋಗಿ ಗಡಿಗುರುತು ಮಾಡುತ್ತೇವೆ. ಬಳಿಕ ಕ್ರೀಯಾಯೋಜನೆನಲ್ಲಿಟ್ಟು ರಸ್ತೆ ದುರಸ್ತಿ ಮಾಡಲಾಗುವುದು ಎಂದು ನಾಗವರ್ಮ ಜೈನ್ ತಿಳಿಸಿದರು.
ಹಂಡೇಲುಸುತ್ತು, ಕಡಲಕೆರೆ ತ್ಯಾಜ್ಯ ಬಿಸಾಡುವುದು, ವಿದ್ಯುತ್ ವ್ಯತ್ಯಯ, ಡೀಮ್ಡ್ ಫಾರೆಸ್ಟ್ ಸಮಸ್ಯೆ, ಎಸ್‍ಸಿ, ಎಸ್‍ಟಿ ಆರ್‍ಟಿಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಜಿ.ಪಂ ಸದಸ್ಯ ಸುಚರಿತ ಶೆಟ್ಟಿ, ತಾ.ಪಂ ಸದಸ್ಯೆ ವನಿತಾ ನಾಯ್ಕ್, ಕೆಡಿಪಿ ಸದಸ್ಯ ವಾಸುದೇವ ನಾಯಕ್, ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶುಭಾ ಹೆಬ್ಬಾರ್, ಪಿಡಿಒ ಸುನೀತಾ ಸಾಲ್ಯಾನ್ ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನೋಡೆಲ್ ಅಧಿಕಾರಿಯಾಗಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸಿಬ್ಬಂದಿ ಶ್ರೀಧರ ಸ್ವಾಗತಿಸಿದರು. ಸಂಜೀವ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
16 ನಾಗಬನಗಳ ಸಸ್ಯವೈವಿದ್ಯತೆ ಅಧ್ಯಯನ
ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಪುತ್ತಿಗೆ ಪಂಚಾಯಿತಿನ ವ್ಯಾಪ್ತಿಗೆ ಒಳಪಡುವ ಸುಮಾರು 16 ನಾಗಬನಗಳ ಸಸ್ಯವೈವಿದ್ಯತೆಯನ್ನು ಅಧ್ಯಯನ ನಡೆಸಿ `ನಾಗಬನ ಸಂರಕ್ಷಣಾ ಜಾಗೃತಿ’ ವರದಿಯ ಪ್ರತಿಯನ್ನು ಪಂಚಾಯಿತಿನ ಅಧ್ಯಕ್ಷರಿಗೆ ವಿಭಾಗ ಮುಖ್ಯಸ್ಥೆ ರಮ್ಯಾ ರೈ ಪಿ.ಡಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ನಾಗಬನದ ಪ್ರಾಮುಖ್ಯತೆಯನ್ನು ಹಾಗು ಅದರ ಸಂರಕ್ಷಣೆಯ ಕುರಿತಾಗಿ ಮನೋಹರ ಆಚಾರ್ಯ ಉಪನ್ಯಾಸಕರು, ಸಸ್ಯಶಾಸ್ತ್ರ ವಿಭಾಗ ತಿಳಿಸಿದರು. ಉಪನ್ಯಾಸಕ ಅರುಣ್ ಕುಮಾರ್ `ಸಸ್ಯಸಂಜೀವಿನಿ’ ವತಿಯಿಂದ ನಡೆಸುವ ಕಾರ್ಯಕ್ರಮಗಳ ವಿವರವನ್ನು ನೀಡಿದರು.







