ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ, ಸದಸ್ಯರ ದ.ಕ. ಜಿಲ್ಲಾ ಪ್ರವಾಸ
ಮಂಗಳೂರು, ಜ. 28: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎನ್ ಕೃಷ್ಣಮೂರ್ತಿ ಹಾಗೂ ಆಯೋಗದ ಸದಸ್ಯರಾದ ವಿ.ಬಿ ಪಾಟೀಲ್, ಎಚ್ ವಿ ಶಿವಶಂಕರ್, ಡಿ.ಜಿ. ಹಸಬಿ, ಮಹಮ್ಮದ್ ಆಲಿ ಕಮ್ಮರಡಿ ಹಾಗೂ ಮಂಜುಳಾ ಬಾಯಿ ಅವರು ಜ.29 ರಿಂದ ಫೆಬ್ರವರಿ 2 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಜ. 29 ರಂದು ಸಂಜೆ ಆಗಮಿಸುವ ನಿಯೋಗವು ಜ. 30 ರಂದು ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದಾರೆ. ನಂತರ ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳು, ಮಧ್ಯಾಹ್ನ ಉಪಹಾರ ಯೋಜನೆ ಶಾಲೆಗಳು, ಆಹಾರ ಸಗಟು ಮಳಿಗೆಗಳು, ನ್ಯಾಯಬೆಲೆ ಅಂಗಡಿಗಳು, ಜಿಲ್ಲಾ ಅಪೌಷ್ಟಿಕ ಮಕ್ಕಳ ಉಪಚಾರ ಘಟಕ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ.ಜಾತಿ/ಪ.ಪಂಗಡ ಮತ್ತು ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸುವರು.
ಫೆ. 2 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆಯ ಎನ್.ಆರ್.ಸಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸುವರು. ಪೂರ್ವಾಹ್ನ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನದ ಬಗ್ಗೆ ಸಭೆಯನ್ನು ನಡೆಸುವರು.
ಫೆ. 2 ರಂದು ಅಪರಾಹ್ನ 12.30 ಕ್ಕೆ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.







