ಮೋದಿ ಯುಗದಲ್ಲಿ ರಾಮಮಂದಿರವೂ ಇಲ್ಲ, ಸಾವರ್ಕರ್ ಗೆ ಭಾರತ ರತ್ನವೂ ಸಿಗಲಿಲ್ಲ
ಶಿವಸೇನೆ ಟೀಕೆ
![ಮೋದಿ ಯುಗದಲ್ಲಿ ರಾಮಮಂದಿರವೂ ಇಲ್ಲ, ಸಾವರ್ಕರ್ ಗೆ ಭಾರತ ರತ್ನವೂ ಸಿಗಲಿಲ್ಲ ಮೋದಿ ಯುಗದಲ್ಲಿ ರಾಮಮಂದಿರವೂ ಇಲ್ಲ, ಸಾವರ್ಕರ್ ಗೆ ಭಾರತ ರತ್ನವೂ ಸಿಗಲಿಲ್ಲ](https://www.varthabharati.in/sites/default/files/images/articles/2019/01/28/175175.jpg)
ಮುಂಬೈ, ಜ. 28: ಸಾವರ್ಕರ್ ಅವರನ್ನು ಮೋದಿ ಯುಗ ಕೂಡ ನಿರ್ಲಕ್ಷಿಸಿರುವುದು ಹಾಗೂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡದೇ ಇರುವುದು ದುರಾದೃಷ್ಟಕರ ಎಂದು ಶಿವಸೇನೆ ಸೋಮವಾರ ಹೇಳಿದೆ.
ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿ ಇರಿಸಿ ದೇಶದ ಅತ್ಯುಚ್ಛ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಹಿರಿಯ ಸಂಗೀತಗಾರ ದಿವಂಗತ ಭೂಪೇನ್ ಹಝಾರಿಕಾ ಅವರಿಗೆ ನೀಡಿರುವುದು ತಪ್ಪು ಎಂದು ಶಿವಸೇನೆ ಹೇಳಿದೆ. ಜೈಲು ಶಿಕ್ಷೆಗೆ ಒಳಗಾದ ಬಳಿಕ ತನ್ನ ಜೀವಮಾನವನ್ನು ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ಕಳೆದ ವಿನಾಯಕ ದಾಮೋದರ್ ಸಾವರ್ಕರ್ ಗೆ ಭಾರತ ರತ್ನ ನೀಡುವಂತೆ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಶಿವಸೇನೆ ಕಳೆದ ಕೆಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿತ್ತು. ಸಾವರ್ಕರ್ ಅವರು ಹಿಂದುತ್ವದ ಪ್ರತಿಪಾದಕರಾಗಿರುವುದರಿಂದ ಈ ಹಿಂದಿನ ಕಾಂಗ್ರೆಸ್ ಸರಕಾರ ಅವರಿಗೆ ಭಾರತ ರತ್ನ ನೀಡಿರಲಿಲ್ಲ. ಆದರೆ, ಕಾಂಗ್ರೆಸ್ ಸರಕಾರ ಮಾಡಿದ ತಪ್ಪನ್ನು ಸರಿಪಡಿಸಲು ಎನ್‌ಡಿಎ ಸರಕಾರಕ್ಕೆ ಇದು ಉತ್ತಮ ಕಾಲ ಎಂದು ಶಿವಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ಕೆಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸಾವರ್ಕರ್‌ಗೆ ಅವಮಾನ ಮಾಡಿದೆ. ಆದರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವೂ ಅದನ್ನೇ ಮಾಡಿದರೆ ಹೇಗೆ?, ಬಿಜೆಪಿ ಪ್ರತಿಪಕ್ಷವಾಗಿರುವಾಗ ಸಾವರ್ಕರ್ ಗೆ ಭಾರತ ರತ್ನ ನೀಡಬೇಕೆಂದು ಪ್ರತಿಪಾದಿಸುತ್ತಿತ್ತು. ಆದರೆ, ರಾಮ ಮಂದಿರ ನಿರ್ಮಾಣವೂ ಆಗಲಿಲ್ಲ. ಸಾವರ್ಕರ್ ಗೆ ಭಾರತ ರತ್ನವೂ ಸಿಗಲಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ದಲ್ಲಿ ಬರೆದುಕೊಂಡಿದೆ.