ಮಹಿಳಾ ಹಾಕಿ: ಭಾರತ - ಸ್ಪೇನ್ ಪಂದ್ಯ ಡ್ರಾ

ಮ್ಯಾಡ್ರಿಡ್, ಜ.28: ಪ್ರಬಲ ಪೈಪೋಟಿ ನಡೆಸಿದ ಭಾರತ ಮಹಿಳಾ ಹಾಕಿ ತಂಡ ರವಿವಾರ ಸಂಜೆ ಸ್ಪೇನ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 1-1 ಗೋಲುಗಳ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಭಾರತದ ಪರ ಗುರ್ಜಿತ್ ಕೌರ್ 43ನೇ ನಿಮಿಷದಲ್ಲಿ ಗೋಲು ಬಾರಿಸಿದರೆ 49ನೇ ನಿಮಿಷದಲ್ಲಿ ಸ್ಪೇನ್‌ನ ಮರಿಯಾ ಟೊಸ್ಟ್ ಗೋಲು ಗಳಿಸಿ ಸಮಬಲ ಸಾಧಿಸಿದರು.
ಪಂದ್ಯದ ಪ್ರಥಮ ಕ್ವಾರ್ಟರ್‌ನಲ್ಲಿ ಇತ್ತಂಡಗಳು ಸಮಬಲದ ಕಾದಾಟ ನಡೆಸಿದವು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಪ್ರಥಮ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆಯಿತು. ಆದರೆ ಸ್ಪೇನ್ ಗೋಲ್‌ಕೀಪರ್ ಸಾಹಸದಿಂದ ಭಾರತಕ್ಕೆ ಗೋಲು ದಕ್ಕಲಿಲ್ಲ. ಪ್ರಥಮಾರ್ಧ ಗೋಲುರಹಿತವಾಗಿ ಕೊನೆಗೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಸ್ಪೇನ್‌ಗೆ ಪೆನಾಲ್ಟಿ ಕಾರ್ನರ್ ದೊರೆಯಿತು. ಆದರೆ ಭಾರತದ ಗೋಲ್‌ಕೀಪರ್ ಗೋಲು ನಿರಾಕರಿಸಿದರು. ಶಾರ್ಟ್ ಕಾರ್ನರ್ ಅವಕಾಶವನ್ನು 43ನೇ ನಿಮಿಷದಲ್ಲಿ ಗೋಲಾಗಿಸುವಲ್ಲಿ ಭಾರತದ ಗುರ್ಜಿತ್ ಕೌರ್ ತಪ್ಪು ಮಾಡಲಿಲ್ಲ. 49ನೇ ನಿಮಿಷದಲ್ಲಿ ಸ್ಪೇನ್‌ನ ಟೊಸ್ಟ್ ಸೊಗಸಾದ ಫೀಲ್ಡ್ ಗೋಲು ದಾಖಲಿಸಿ ಸಮಬಲ ಸಾಧಿಸಿದರು.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ 2-3ರಿಂದ ಕಳೆದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತದ ವನಿತೆಯರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡರು.





