ಇಂಡಿಯನ್ ಸಯನ್ಸ್ ಕಾಂಗ್ರೆಸ್ ಅವೈಜ್ಞಾನಿಕ ಹೇಳಿಕೆಗೆ ಐಎಸ್‌ಸಿಎ ಕಳವಳ
ಚಂಡಿಗಢ, ಜ. 28: ಪಂಜಾಬ್‌ನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ವಿಜ್ಞಾನಿಗಳ ಸಮಾವೇಶದ ಸಂದರ್ಭ ಮಕ್ಕಳ ಕಾರ್ಯಕ್ರಮದಲ್ಲಿ ಅವೈಜ್ಞಾನಿಕ ಪ್ರತಿಪಾದನೆಗಳನ್ನು ಮಾಡಲಾಗಿತ್ತು ಎಂಬುದನ್ನು ತಿಳಿದು ಆಘಾತವಾಯಿತು ಎಂದು ಇಂಡಿಯನ್ ಸಯನ್ಸ್ ಕಾಂಗ್ರೆಸ್ ಅಸೋಸಿಯೇಶನ್ (ಐಎಸ್‌ಸಿಎ) ಹೇಳಿದೆ.
ಮಕ್ಕಳ ವಿಜ್ಞಾನ ಸಮಾವೇಶದ ‘ಮಕ್ಕಳನ್ನು ಭೇಟಿಯಾಗಿ ಕಾರ್ಯಕ್ರಮ’ದಲ್ಲಿ ರಾಜ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು ಅವೈಜ್ಞಾನಿಕ ವಿಷಯಗಳನ್ನು ಎತ್ತಿರುವುದು ಹಾಗೂ ಚರ್ಚೆ ನಡೆಸಿರುವುದರಿಂದ ನನಗೆ ನಿರಾಶೆಯಾಗಿದೆ ಎಂದು ಇಂಡಿಯನ್ ಸಯನ್ಸ್ ಕಾಂಗ್ರೆಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ. ಮನೋಜ್ ಕುಮಾರ್ ಚಕ್ರವರ್ತಿ ಹೇಳಿದ್ದಾರೆ. ಉಪ ಕುಲಪತಿ ಅವರ ಅವೈಜ್ಞಾನಿಕ ಹೇಳಿಕೆಯನ್ನು ವಿರೋಧಿಸಿ ಅವರು ವಿಜ್ಞಾನಿಗಳು ಹಾಗೂ ಸಂಶೋಧಕರ ಗುಂಪಿಗೆ ಜನವರಿ 11ರಂದು ಪತ್ರ ಬರೆದಿದ್ದಾರೆ.
ಐಎಸ್‌ಸಿಎ ತೀವ್ರ ಕಳವಳಗೊಂಡಿದೆ. ಭವಿಷ್ಯದಲ್ಲಿ ಅಧಿವೇಶನಗಳಲ್ಲಿ ಇಂತಹ ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವುದನ್ನು ಸಹಿಸುವುದಿಲ್ಲ ಎಂದು ಡಾ. ಮನೋಜ್ ಕುಮಾರ್ ಚಕ್ರವರ್ತಿ ತಿಳಿಸಿದ್ದಾರೆ.