ಫ್ಲಾಟ್ ನೀಡುವುದಾಗಿ 23 ಲಕ್ಷ ರೂ. ವಂಚನೆ: ದೂರು
ಮಂಗಳೂರು, ಜ.28: ಫ್ಲಾಟ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 23ಲಕ್ಷ ರೂ. ಪಡೆದು ವಂಚನೆ ಮಾಡಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಕೈಲೈನ್ ಬಿಲ್ಡರ್ ಸಂಸ್ಥೆಯ ಅವಿನಾಶ್ ಪ್ರಭು ಮತ್ತು ಧೀರಜ್ ಪ್ರಭು ಪ್ರಕರಣದ ಆರೋಪಿಗಳು ಎಂದು ತಿಳಿದುಬಂದಿದ್ದು, ಹರಿಕಿಶನ್ ಶೆಟ್ಟಿ ವಂಚನೆಗೊಳಗಾದವರು.
ಪ್ರಕರಣ ವಿವರ: ಸ್ಕೈಲೈನ್ ಬಿಲ್ಡರ್ ಸಂಸ್ಥೆಯಿಂದ ನಗರದ ಮೇರಿಹಿಲ್ ಹರಿಪದವು ರೋಡ್‌ನಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಇದರ ಪಾಲುದಾರ ರಾದ ಅವಿನಾಶ್ ಪ್ರಭು ಮತ್ತು ಧೀರಜ್ ಪ್ರಭು ಅವರು ಫ್ಲ್ಯಾಟ್ ನೀಡುವುದಾಗಿ ನಂಬಿಸಿ 2009ರಿಂದ 2013ರವರೆಗೆ ಹರಿಕಿಶನ್ ಶೆಟ್ಟಿ ಅವರಿಂದ 23ಲಕ್ಷ ರೂ. ಪಡೆದಿದ್ದರು. 2010ರಲ್ಲಿ ಫ್ಲ್ಯಾಟ್ ಬಿಟ್ಟುಕೊಡುವುದಾಗಿ ಹೇಳಿದ್ದರೂ, ಹಣ ಪಡೆದ ಬಳಿಕ ಕಾಮಗಾರಿ ಮುಗಿಸದೆ ದಿನದೂಡುತ್ತಿದ್ದರು. ಇದರಿಂದ ವಂಚನೆಗೊಳಗಾದ ಹರಿಕಿಶನ್ ಶೆಟ್ಟಿ ಕಾವೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾನಾ ಠಾಣೆಗಳಲ್ಲಿ ದೂರು: ಆರೋಪಿಗಳು ಪ್ರಾಜೆಕ್ಟ್-1ರಲ್ಲಿಯೂ ಇದೇ ರೀತಿ ವಂಚನೆ ಮಾಡಿರುವ ಬಗ್ಗೆ ನಗರದ ಕದ್ರಿ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಅವಿನಾಶ್ ಪ್ರಭು ವಿರುದ್ಧ ಬೆಂಗಳೂರಿನ ಠಾಣೆಯಲ್ಲೂ ವಂಚನೆ ಪ್ರಕರಣವಿದೆ ಎಂದು ತಿಳಿದುಬಂದಿದೆ.





