ಪಾರಸ್ ಖಡ್ಕಾ ಚೊಚ್ಚಲ ಶತಕ: ನೇಪಾಳಕ್ಕೆ ಪ್ರಥಮ ಸರಣಿ ವಿಜಯ

ದುಬೈ, ಜ.29: ನಾಯಕ ಪಾರಸ್ ಖಡ್ಕಾ ಅವರ ಚೊಚ್ಚಲ ಶತಕದ ನೆರವಿನಿಂದ ನೇಪಾಳ ತಂಡ 3ನೇ ಏಕದಿನ ಪಂದ್ಯದಲ್ಲಿ ಯುಎಇ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಮೊದಲ ಬಾರಿ ಸರಣಿ ಜಯಿಸಿದ ಸಾಧನೆ ಮಾಡಿದೆ. ನಾಯಕ ಖಡ್ಕಾ ಅವರ ಶತಕ ನೇಪಾಳ ದಾಂಡಿಗನೊಬ್ಬನ ಪ್ರಥಮ ಶತಕವಾಗಿರುವುದು ವಿಶೇಷ.
ಇಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ಯುಎಇ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಶೈಮನ್ ಅನ್ವರ್ (87) ಹಾಗೂ ಮುಹಮ್ಮದ್ ಬೂಟಾ(59) ಅವರ ಅರ್ಧಶತಕಗಳ ನೆರವಿನಿಂದ ಆತಿಥೇಯ ತಂಡ 6 ವಿಕೆಟ್ ಕಳೆದುಕೊಂಡು ಸರಣಿಯಲ್ಲೇ ಗರಿಷ್ಠ 254 ರನ್ ಗಳಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ನೇಪಾಳ 44.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತು. ತಂಡದ ಪರ ನಾಯಕ ಪಾರಸ್ ಖಡ್ಕಾ 109 ಎಸೆತಗಳನ್ನು ಎದುರಿಸಿ 15 ಬೌಂಡರಿ 1 ಸಿಕ್ಸರ್ ನೆರವಿನಿಂದ 115 ರನ್ ಗಳಿಸಿದರು.
Next Story





