ಭಾರತ ಕಠಿಣ ಎದುರಾಳಿ :ಇಟಲಿ ತಂಡದ ನಾಯಕ ಕೊರಾಡೊ
ಡೇವಿಸ್ ಕಪ್
ಕೋಲ್ಕತಾ, ಜ.28: ಇಟಲಿ ತಂಡದ ಆಟಗಾರರಿಗಿಂತ ಕೆಳ ರ್ಯಾಂಕಿನ ಆಟಗಾರರನ್ನು ಭಾರತ ತಂಡ ಹೊಂದಿದ್ದರೂ ಡೇವಿಸ್ ಕಪ್‌ನಲ್ಲಿ ಅದು ಕಠಿಣ ಸವಾಲು ಒಡ್ಡಲಿದೆ ಎಂದು ಸೋಮವಾರ ಇಟಲಿ ಡೇವಿಸ್ ಕಪ್ ಟೆನಿಸ್ ತಂಡದ ಆಟವಾಡದ ನಾಯಕ ಕೊರಾಡೊ ಬ್ಯಾರಝ್ಝಟ್ಟಿ ಹೇಳಿದ್ದಾರೆ. ವಿಶ್ವ ನಂ.18 ಆಟಗಾರ ಮಾರ್ಕೊ ಸೆಚ್ಚಿನಾಟೊ ಇಟಲಿ ತಂಡವನ್ನು ಮುನ್ನಡೆಸಲಿದ್ದು, ವಿಶ್ವ ರ್ಯಾಂಕಿಂಗ್‌ನಲ್ಲಿ 60ರೊಳಗಿನ ಸ್ಥಾನದಲ್ಲಿರುವ ಇಬ್ಬರು ಆಟಗಾರರು ಆ ತಂಡದಲಿದ್ದಾರೆ. ಭಾರತದ ಅಗ್ರ ಶ್ರೇಯಾಂಕದ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ವಿಶ್ವ ರ್ಯಾಂಕಿಂಗ್‌ನಲ್ಲಿ 102ನೇ ಸ್ಥಾನದಲ್ಲಿದ್ದಾರೆ. ‘‘ಡೇವಿಸ್‌ಕಪ್‌ನಲ್ಲಿ ಡ್ರಾನಲ್ಲಿ ಯಾರು ಪ್ರಥಮವಾಗಿ ಆಡುತ್ತಾರೆ ಹಾಗೂ ಯಾರು ಎರಡನೆಯವರಾಗಿ ಕಣಕ್ಕಿಳಿಯುತ್ತಾರೆ ಎಂಬುದಕ್ಕಷ್ಟೇ ರ್ಯಾಂಕಿಂಗ್ ಮಹತ್ವ ಪಡೆದಿದೆ. ಅಂಗಣಕ್ಕಿಳಿದಾಗ ಮಾತ್ರ ಪ್ರತಿಯೊಂದು ಬದಲಾವಣೆಯಾಗುತ್ತದೆ. ನನ್ನ ಪ್ರಕಾರ ಯಾರೂ ದುರ್ಬಲರಲ್ಲ. ಇದೊಂದು ಕಠಿಣ ಸ್ಪರ್ಧೆಯಾಗಿರಲಿದೆ’’ ಎಂದು ಬ್ಯಾರಝ್ಝಟ್ಟಿ ಹೇಳಿದ್ದಾರೆ.
ಹೆಡ್ ಟು ಹೆಡ್ ದಾಖಲೆಯನ್ನು ಗಮನಿಸಿದರೆ ಇಟಲಿ 4-1 ರಿಂದ ಭಾರತಕ್ಕಿಂತ ಮುನ್ನಡೆಯಲ್ಲಿದೆ. 1985ರಲ್ಲಿ ಕೊನೆಯ ಬಾರಿ ಭಾರತ ಇಟಲಿ ವಿರುದ್ಧ ಜಯ ಸಾಧಿಸಿತ್ತು. ಫೆ.1 ಹಾಗೂ 2ರಂದು ಉಭಯ ದೇಶಗಳ ಮಧ್ಯೆ ಡೇವಿಸ್ ಕಪ್ ಟೂರ್ನಿ ಆರಂಭವಾಗಲಿದೆ. ಪ್ರವಾಸಿ ತಂಡದ ಆಟಗಾರರನ್ನು ಕ್ಲೇ ಕೋರ್ಟ್‌ನಲ್ಲಿ ತಜ್ಞರು ಎಂದು ಭಾರತ ಪರಿಗಣಿಸಿದೆ.





