ನಿಮ್ಮ ಈಡೇರದ ಕನಸು ಸಾಕಾರಗೊಳಿಸಲು ಮಕ್ಕಳ ಮೇಲೆ ಒತ್ತಡ ಹೇರಬೇಡಿ: ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಪ್ರಧಾನಿ
ಹೊಸದಿಲ್ಲಿ, ಜ. 29: ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈಡೇರದ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಮಕ್ಕಳ ಮೇಲೆ ಒತ್ತಡ ಹೇರಬೇಡಿ ಎಂದು ಹೆತ್ತವರಲ್ಲಿ ಮನವಿ ಮಾಡಿದ್ದಾರೆ.
ದಿಲ್ಲಿಯ ತಾಲ್ಕಾಟೋರಾ ಕ್ರೀಡಾಂಗಣದಲ್ಲಿ ಪ್ರಧಾನ ಮಂತ್ರಿ ಅವರ ಈ ಸಂವಹನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಲವು ವಿಭಾಗಗಳ ವಿದ್ಯಾರ್ಥಿಗಳು, ಅಧ್ಯಾಪಕರೊಂದಿಗೆ ಸಂವಹನ ನಡೆಸಿದ ಪ್ರಧಾನಿ, ಪ್ರತಿ ಮಗುವಿಗೆ ಕೂಡ ಅದರದ್ದೇ ಆದ ಶಕ್ತಿ, ಸಾಮರ್ಥ್ಯ ಇದೆ. ಪ್ರತಿ ಮಗುವಿನ ಈ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದರು. ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನು ಹೆತ್ತವರು ತಮ್ಮ ವಿಸಿಟಿಂಗ್ ಕಾರ್ಡ್ ಎಂದು ಭಾವಿಸಬಾರದು. ಯಾಕೆಂದರೆ ಅದುವೇ ಉದ್ದೇಶವಾಗಿದ್ದರೆ ಮಕ್ಕಳ ಮೇಲಿನ ನಿರೀಕ್ಷೆ ಅವಾಸ್ತವಿಕವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಕಲಿಕೆಯಲ್ಲಿ ತಂತ್ರಜ್ಞಾನದ ದುಷ್ಪರಿಣಾಮದ ಕುರಿತು ತಾಯಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಅವರು, ತಂತ್ರಜ್ಞಾನ ಜ್ಞಾನದ ವಿಸ್ತರಣೆಗೆ ಕಾರಣವಾಗಬೇಕು. ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವುದು ಹಾಳು ಎಂದು ನಾನು ಹೇಳಲಾರೆ. ಹೊಸ ತಂತ್ರಜ್ಞಾನಗಳನ್ನು ಪರಿಚಯ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಉತ್ತಮ ಎಂದರು. ಫಲಿತಾಂಶದ ಒತ್ತಡದ ಬಗ್ಗೆ ಮಾತನಾಡಿದ ಪ್ರಧಾನಿ, ಬದುಕಿನಲ್ಲಿ ಪರೀಕ್ಷೆ ಮುಖ್ಯವಾದುದು. ಆದರೆ, ಅದಕ್ಕೇ ಒತ್ತು ನೀಡಬಾರದು. ಪರೀಕ್ಷೆ ನಿಮ್ಮ ಬದುಕೇ ? ಅಥವಾ ಅದು 10-11ನೇ ತರಗತಿಯ ಗ್ರೇಡ್ ಪಡೆಯಲು ಇರುವ ದಾರಿಯೇ? ಎಂಬುದನ್ನು ನೀವೇ ಪ್ರಶ್ನಿಸಿಕೊಳ್ಳಿ. ಒಮ್ಮೆ ನಿಮಗೆ ಉತ್ತರ ಸಿಕ್ಕಿದರೆ, ನಿಮ್ಮ ಒತ್ತಡ ಕಡಿಮೆಯಾಗುತ್ತದೆ ಎಂದರು.
ಒಂದು ವೇಳೆ ಜನರು ನಮ್ಮಿಂದ ನಿರೀಕ್ಷಿಸುತ್ತಾ ಎಂದರೆ, ಅದು ಅವರು ನಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ತೋರಿಸುತ್ತದೆ. ನಾವು ಅದಕ್ಕೆ ಅರ್ಹರು ಎಂಬುದನ್ನು ತೋರಿಸಿಕೊಡಬೇಕು. ನಾವು ಅವರ ನಿರೀಕ್ಷೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು ಎಂದರು. ಒಂದು ವಿಷಯ ನಮಗೆಲ್ಲರಿಗೂ ಮುಖ್ಯವಾದುದು. ಅದು ಸಮಯ ನಿರ್ವಹಣೆ. ಸಮಯ ನಮ್ಮ ಸ್ವಂತದ್ದು. ನಮ್ಮ ಸಮಯವನ್ನು ಹೇಗೆ ಸದುಪಯೋಗಪಡಿಸಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಅದು ಸಂಪೂರ್ಣ ನಮ್ಮ ನಿಯಂತ್ರಣದಲ್ಲಿ ಇರಬೇಕು ಎಂದು ಪ್ರಧಾನಿ ಹೇಳಿದರು.