ಬಾಲ್ ಶಕ್ತಿ ಪುರಸ್ಕಾರ್‌ನಿಂದ ಕಡೆಗಣನೆ ಆರೋಪ: ನ್ಯಾಯಕ್ಕಾಗಿ ರಾಷ್ಟ್ರಪತಿ, ಪ್ರಧಾನಿಗೆ ಯುವ ವಿಜ್ಞಾನಿ ಮೊರೆ

ಮಂಗಳೂರು, ಜ.30: ವಿಜ್ಞಾನದ ಸಾಧನೆಗಾಗಿ ಭಾರತ ಸರಕಾರದಿಂದ ನೀಡಲಾಗುವ ಬಾಲ್ ಶಕ್ತಿ ಪುರಸ್ಕಾರಕ್ಕೆ ತನ್ನನ್ನು ಕಡೆಗಣಿಸಲಾಗಿದೆ ಎಂದು ನೋವು ವ್ಯಕ್ತಪಡಿಸಿರುವ ಯುವ ವಿಜ್ಞಾನಿ ಅಮನ್ ಕೆ.ಎ. ಇದೀಗ ನ್ಯಾಯಕ್ಕಾಗಿ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಮೊರೆ ಇಟ್ಟಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತನ್ನ ಸಾಧನೆಯನ್ನು ವಿವರಿಸಿದ ಅಮನ್ ಕೆ.ಎ., ಭವಿಷ್ಯದಲ್ಲಿ ವಿಜ್ಞಾನಿ ಆಗಬೇಕೆಂಬ ಹದಾಸೆಯನ್ನು ವ್ಯಕ್ತಪಡಿಸಿದ್ದಾರೆ.
‘‘ಬಾಲ್ಯದಿಂದಲೇ ನನಗೆ ವಿಜ್ಞಾನ ವಿಷಯದ ಬಗ್ಗೆ ಹೆಚ್ಚು ಆಸಕ್ತಿ. ಸಣ್ಣಪುಟ್ಟ ಪ್ರಯೋಗಳನ್ನು ಮಾಡುತ್ತಿದೆ. 2016ರಲ್ಲಿ 9ನೆ ತರಗತಿಯಲ್ಲಿದ್ದಾಗ ಶಾಲೆಯ ವಿಜ್ಞಾನ ಪ್ರಯೋಗ ಮಾದರಿಯಾಗಿ ಬಿಂಬುಳಿ ರಸದಲ್ಲಿ ರಬರ್ ಶೀಟ್ ತಯಾರಿಸುವ ಆಲೋಚನೆಯನ್ನು ನನ್ನ ಅಜ್ಜನ ಸಹಾಯದಿಂದ ಶಾಲೆಯ ವಿಜ್ಞಾನ ಶಿಕ್ಷಕರ ಮುಂದಿಟ್ಟಿದ್ದೆ. ತಾಲೂಕು ಮಟ್ಟದಲ್ಲಿ ಈ ಸ್ಪರ್ಧೆಯಲ್ಲಿ ಭಾಗಹಿಸಿ ಪ್ರಾದೇಶಿಕ ಮಟ್ಟದ ಪ್ರಶಸ್ತಿಗೆ ಬಿಂಬುಳಿಯ ಅಗತ್ಯವಿದ್ದರಿಂದ ನನ್ನ ಸಹಪಾಠಿ ನಚಿಕೇತ್ ಜತೆ ಈ ವಿಜ್ಞಾನ ಮಾದರಿಯನ್ನು ಮುಂದುವರಿಸಲಾಯಿತು. ಪ್ರಾದೇಶಿಕ ಮಟ್ಟದಲ್ಲಿ ನಾನು ಒಬ್ಬಂಟಿಯಾಗಿಯೇ ಭಾಗವಹಿಸಿ ಚಿನ್ನದ ಪದಕವನ್ನುಗಳಿಸಿದ್ದೆ’’ ಎಂದು ಅಮನ್ ಹೇಳಿದರು.
‘‘ಬಳಿಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ವಿಜ್ಞಾನಿಗಳು ಹಾಗೂ ಶಾಲಾ ಶಿಕ್ಷಕರ ನೆರವಿನೊಂದಿಗೆ ಪ್ರಯೋಗದಲ್ಲಿ ಮತ್ತಷ್ಟು ಉನ್ನತ ಮಟ್ಟದ ಸಂಶೋಧನೆಗಳೊಂದಿಗೆ ನಾನು ಹಾಗೂ ನಚಿಕೇತ್ ಸ್ಪರ್ಧಿಸಿದ್ದೆವು. ರಾಜ್‌ಕೋಟ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ನಮ್ಮ ವಿಜ್ಞಾನ ಮಾದರಿಗೆ ಚಿನ್ನದ ಪದಕ ಹಾಗೂ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ನಮಗೆ ಬೆಳ್ಳಿ ಪದಕ ದೊರಕಿತ್ತು. ನಾನು 10ನೆ ತರಗತಿಯಲ್ಲಿದ್ದಾಗ ವಿಜ್ಞಾನದಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಬಾಲ್ ಶಕ್ತಿ ಪುರಸ್ಕಾರ್ ದೊರಕುವ ವಿಷಯ ತಿಳಿದು ನಚಿಕೇತ್‌ನಂತೆ ನಾನೂ ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ. ನಮ್ಮ ವಿಜ್ಞಾನ ಮಾದರಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕವಾಗಿ ಪ್ರಮಾಣ ಪತ್ರಗಳು, ಪದಕಗಳು ಲಭಿಸಿದ್ದವು. ಆ ಪ್ರಮಾಣ ಪತ್ರಗಳ ಪ್ರತಿಯೊಂದಿಗೆ ನಾನೂ ನನ್ನ ಸಾಧನೆಯೊಂದಿಗೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ನನಗೆ ಪ್ರಶಸ್ತಿ ಬರಲಿಲ್ಲ’’ ಎಂದು ಅಮನ್ ಬೇಸರಿಸಿದರು.
‘‘ನಚಿಕೇತ್‌ಗೆ ಪ್ರಶಸ್ತಿ ಬಂದಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಕಳೆದ 11 ವರ್ಷಗಳಿಂದ ನಾವಿಬ್ಬರೂ ಜತೆಯಾಗಿ ಒಂದೇ ಶಾಲೆ- ಕಾಲೇಜಿನಲ್ಲಿ ಕಲಿಯುತ್ತಿದ್ದೇವೆ. ಆತ ನನ್ನ ಒಳ್ಳೆಯ ಸ್ನೇಹಿತ. ಆತನಿಗೆ ಪ್ರಶಸ್ತಿ ದೊರಕಿರುವ ಬಗ್ಗೆ ನಾನು ಅಭಿನಂದನೆಯನ್ನೂ ತಿಳಿಸಿದ್ದೇನೆ. ಬಿಂಬುಳಿ ರಸದಿಂದ ರಬ್ಬರ್ ಶೀಟ್ ಗಟ್ಟಿಗೊಳಿಸುವ ವಿಜ್ಞಾನ ಮಾದರಿಗಾಗಿ ನಚಿಕೇತ್‌ಗೆ ಪ್ರಶಸ್ತಿ ಬಂದಿರುವ ಬಗ್ಗೆ ಪ್ರಧಾನ ಮಂತ್ರಿಯವರೂ ಟ್ವೀಟ್ ಮಾಡಿದ್ದಾರೆ. ಹಾಗಿರುವಾಗ ಆ ವಿಜ್ಞಾನ ಮಾದರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನನಗೆ ಪ್ರಶಸ್ತಿ ಬಾರದಿರುವ ಬಗ್ಗೆ ನೋವಾಗಿದೆ. ಈ ರೀತಿ ಜತೆಯಾಗಿ ಸಾಧನೆ ಮಾಡುವಾಗ ಒಬ್ಬರನ್ನೂ ಮಾತ್ರವೇ ಪ್ರಶಸ್ತಿಗೆ ಪರಿಗಣಿಸಿ ಮತ್ತೊಬ್ಬರನ್ನು ಕಡೆಗಣಿಸಬಾರದು. ಮುಂದೆ ಹೀಗಾಗಬಾರದು’’ ಎಂದು ಅಮನ್ ಹೇಳಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಮನ್ ತಂದೆ, ನಿವೃತ್ತ ಯೋಧ ಹಾಗೂ ಪ್ರಸ್ತುತ ಪುತ್ತೂರು ಅಗ್ನಿಶಾಮಕ ದಳದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಅಝೀಝ್ ಮಾತನಾಡಿ, ‘‘ಸೇನೆಯಲ್ಲಿ ಕೆಲಸ ಮಾಡಿರುವ ನನಗೆ ನನ್ನ ಮಗ ವಿಜ್ಞಾನಿ ಆಗಬೇಕೆಂಬ ಬಯಕೆ ಹೊಂದಿರುವುದು ಅಭಿಮಾನದ ವಿಷಯ. ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ರಾಷ್ಟ್ರಪತಿಯಿಂದ ಪುರಸ್ಕಾರ ಪಡೆಯುವುದು ಹೆಮ್ಮೆಯ ವಿಚಾರ. ಆದರೆ ಸಂಶೋಧನೆಗೆ ಮೂಲ ಕಾರಣವಾದ ನನ್ನ ಮಗನಿಗೆ ಆ ಪುರಸ್ಕಾರ ದೊರೆಯದ ಬಗ್ಗೆ ಬೇಸರವಾಗಿದೆ’’ ಎಂದರು.
ಈ ಬಗ್ಗೆ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯನ್ನು ಸ್ಥಳೀಯ ಸಂಸದರು ಹಾಗೂ ಶಾಸಕರು ಗಮನ ಸೆಳೆಯಬೇಕು ಎಂದು ಹೇಳಿದ ಅವರು, ಈ ಬಗ್ಗೆ ಸಂಬಂಧಪಟ್ಟವರಿಗೆ ಲಿಖಿತವಾಗಿ ಮನವಿ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಅಮನ್‌ರ ಅಜ್ಜ ಇಬ್ರಾಹಿಂ ಉಪಸ್ಥಿತರಿದ್ದರು.









