ಉಡುಪಿ: ಯುವತಿಯ ಅಪಹರಣ ಶಂಕೆ; ಕಾರು ಬಿಟ್ಟು ಆರೋಪಿಗಳು ಪರಾರಿ
ಬೊಬ್ಬಿಡುತ್ತಿದ್ದ ಯುವತಿಯನ್ನು ಕಾರಿನಿಂದ ಹೊರದೂಡಿದ ದುಷ್ಕರ್ಮಿ

ಉಡುಪಿ, ಜ.30: ಕಿನ್ನಿಮುಲ್ಕಿ ಸಮೀಪದ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಸಿನಿಮೀಯ ಮಾದರಿಯ ಘಟನೆಯೊಂದು ಸಂಭವಿಸಿದ್ದು, ಬಲತ್ಕಾರವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಯುವತಿಯನ್ನು ಹೊರದೂಡಿದ ದುಷ್ಕರ್ಮಿ, ಕಾರನ್ನು ಅಲ್ಲೇ ಸಮೀಪದ ರಸ್ತೆ ಬದಿ ಬಿಟ್ಟು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೂದು ಬಣ್ಣದ ರಿಟ್ಝ್ ಕಾರಿನಲ್ಲಿ ಯುವತಿಯೊಬ್ಬಳು ಬೊಬ್ಬೆ ಹಾಕುತ್ತಿದ್ದು, ಕಿನ್ನಿಮುಲ್ಕಿ ಬಲಾಯಿಪಾದೆ ರಿಕ್ಷಾ ನಿಲ್ದಾಣದ ಸಮೀಪ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಚಲಿಸುತ್ತಿದ್ದ ಕಾರಿನ ಬಾಗಿಲನ್ನು ತೆರೆದು ಅರ್ಧ ದೇಹವನ್ನು ಹೊರಹಾಕಿದ್ದು, ತಕ್ಷಣ ಚಾಲಕ ಕಾರನ್ನು ನಿಧಾನ ಮಾಡಿ ಆಕೆಯನ್ನು ಕಾರಿನಿಂದ ಹೊರಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಕ್ಷಣ ರಿಕ್ಷಾ ಚಾಲಕರು ಅಲ್ಲಿಗೆ ಆಗಮಿಸಿದ್ದು, ಈ ವೇಳೆ ಹಿಂಬದಿಯಿಂದ ಚಾಲಕ ಸೇರಿದಂತೆ ಓರ್ವ ಮಹಿಳೆ ಇದ್ದ ಪಜಿರೋ ವಾಹನವೊಂದು ಬಂದಿದೆ. ಕೂಡಲೇ ಆ ಯುವತಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತು ಹೋಗಿದ್ದಾಳೆ. ಕಾರು ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಯೂಟರ್ನ್ ಮಾಡಿ ಮಂಗಳೂರು ಕಡೆ ಸಾಗಿತು ಎಂದು ಪ್ರತ್ಯಕ್ಷದರ್ಶಿಗಳಾದ ರಿಕ್ಷಾ ಚಾಲಕ ಶಂಕರ್ ಶೇರಿಗಾರ್ ತಿಳಿಸಿದ್ದಾರೆ.
ಯುವತಿಯನ್ನು ಕಾರಿನಿಂದ ಹೊರ ದೂಡಿದ ಚಾಲಕ ರಿಟ್ಝ್ ಕಾರನ್ನು ಕಿನ್ನಿ ಮುಲ್ಕಿ ಫ್ಲೈಓವರ್ ಮೂಲಕ ನಗರದ ಕಡೆ ಚಲಾಯಿಸಿಕೊಂಡು ಬಂದಿದ್ದು, ಈ ಮಧ್ಯೆ ಸರ್ವಿಸ್ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ಅಲ್ಲೇ ಸಮೀಪದ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಎದುರು ನಿಲ್ಲಿಸಿ ಬಸ್ ಹತ್ತಿಕೊಂಡು ಪರಾರಿಯಾದ ಎಂದು ಕಾರನ್ನು ಬೆನ್ನತ್ತಿ ಬಂದ ರಿಕ್ಷಾ ಚಾಲಕರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಜೈಶಂಕರ್, ಮಲ್ಪೆ ಪೊಲೀಸ್ ನಿರೀಕ್ಷಕ ಮಧು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಕೀಮೇಕರ್‌ಗಳನ್ನು ಸ್ಥಳಕ್ಕೆ ಕರೆಸಿ ಕಾರಿನ ಡೋರ್ ತೆರೆಯಲಾಯಿತು. ಕಾರಿನೊಳಗಿದ್ದ ಲೇಡಿಸ್ ಬ್ಯಾಗ್‌ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಅಲ್ಲದೆ ಕಾರಿನಲ್ಲಿ ಯುವತಿಯ ಚಪ್ಪಲ್, ಪುರುಷರ ಚಪ್ಪಲ್, ಹೆಡ್‌ಫೋನ್ ಇರುವುದು ಕಂಡುಬಂದಿದೆ. ಕಾರನ್ನು ಪೊಲೀಸರು ವಶಪಡಿಸಿ ಕೊಂಡು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
‘ಇದೊಂದು ಅಪರಾಧ ಕೃತ್ಯದಂತೆ ಕಂಡುಬರುತ್ತಿದ್ದು, ಹಲವು ಸಂಶಯ ಗಳಿಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಅಪಹರಣದ ಶಂಕೆ ಇರುವುದರಿಂದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಇಡೀ ಪ್ರಕರಣವನ್ನು ಬೇಧಿಸಬೇಕು’ ಎಂದು ಸಮಾಜಸೇವಕ ಕೃಷ್ಣಮೂರ್ತಿ ಕಿನ್ನಿಮುಲ್ಕಿ ಒತ್ತಾಯಿಸಿದ್ದಾರೆ.









