ಅರಮೇರಿಯಲ್ಲಿ ಕೊಳೆತ ಸ್ಥಿತಿಯ ಮೃತದೇಹ ಪತ್ತೆ ಪ್ರಕರಣ: ಕೊಲೆ ಮಾಡಿದ ಪತಿಯ ಬಂಧನ

ಮಡಿಕೇರಿ ಜ.30 :ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಮೇರಿ ಗ್ರಾಮದ ಮಲ್ಲಮಟ್ಟಿ ಎಂಬಲ್ಲಿ ಇತ್ತೀಚೆಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಮೃತ ದೇಹ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮರ್ಜೀನಾ ಖಾತುನ್ ಎಂಬಾಕೆಯೇ ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಅಸ್ಸಾಂ ರಾಜ್ಯದ ಉಸ್ಮಾನ್ ಆಲಿಯೇ ಬಂಧಿತ ಆರೋಪಿಯಾಗಿದ್ದಾನೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.26 ರಂದು ಕೊಳೆತ ಸ್ಥಿತಿಯಲ್ಲಿ ಮರ್ಜೀನಾ ಖಾತುನ್ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ 04/2019 ಕಲಂ. 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಅವರ ನಿರ್ದೇಶನದಂತೆ ಜಿಲ್ಲಾ ಅಪರಾದ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ಸಿಪಿಐ ವಿರಾಜಪೇಟೆ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಆರೋಪಿಯನ್ನು ಪತ್ತೆಹಚ್ಚಲಾಯಿತು.
ಮೃತೆ ಮರ್ಜೀನಾ ಖಾತುನ್‍ಳ ಪೂರ್ವಾಪರಗಳ ಬಗ್ಗೆ ಮಾಹಿತಿ ಕಲೆಹಾಕಿದ ಡಿಸಿಐಬಿ ತಂಡ ಮರ್ಜೀನಾಳ ಗಂಡ ಉಸ್ಮಾನ್ ಅಲಿ ಯೇ ಕೊಲೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ವಶಕ್ಕೆ ಪಡೆಯಿತು. ಮೃತೆ ಮರ್ಜೀನಾ ಆರೋಪಿಯ ಎರಡನೇ ಪತ್ನಿಯಾಗಿದ್ದು, ತನ್ನ ಸಣ್ಣ ಮಗುವನ್ನು ಆರೋಪಿಯೊಂದಿಗೆ ಹೆಗ್ಗಳದಲ್ಲಿ ಬಿಟ್ಟು ಮಲ್ಲಮಟ್ಟಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಳು. ಉಸ್ಮಾನ್ ನಿಗೆ ಮೊದಲ ಪತ್ನಿಯನ್ನು ಬಿಟ್ಟು ಬರುವಂತೆ ಮರ್ಜೀನಾ ಪೀಡಿಸುತ್ತಿದ್ದುದೇ ಕೊಲೆಗೆ ಕಾರಣ ಎಂದು ಎಸ್‍ಪಿ ಡಾ.ಸುಮನ್ ಪಣ್ಣೇಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತ ಉಸ್ಮಾನ್ ಆಲಿ ಅಸ್ಸಾಂ ರಾಜ್ಯದ ದೋರಾಂಗ್ ಜಿಲ್ಲೆಯವನಾಗಿದ್ದು, ವಿರಾಜಪೇಟೆಯ ಹೆಗ್ಗಳ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸಕ್ಕಿದ್ದ ಎಂದು ಎಸ್‍ಪಿ ತಿಳಿಸಿದರು.
ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಮಹೇಶ್, ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಸುರೇಶ್ ಬೋಪಣ್ಣ, ಸಿಬ್ಬಂದಿಯವರಾದ ಕೆ.ವೈ. ಹಮ್ಮೀದ್ ಎ.ಎಸ್.ಐ, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎಸ್. ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವಾದ ಬೆಳ್ಳಿಯಪ್ಪ, ಚಾಲಕರುಗಳಾದ ಶಶಿಕುಮಾರ್, ಗೋಪಿನಾಥ್ ಹಾಗೂ ಸಿಡಿಆರ್ ಸೆಲ್‍ನ ಎಂ.ಎ. ಗಿರೀಶ್ ಹಾಗೂ ಸಿ.ಕೆ. ರಾಜೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಎಸ್‍ಪಿ ಸುಮನ್ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಹೊರ ರಾಜ್ಯದವರ ಮಾಹಿತಿ ನೀಡಿ
ಕೊಡಗು ಜಿಲ್ಲೆಯಾದ್ಯಂತ ಕಾಫಿ ತೋಟಗಳಲ್ಲಿ ಅಸ್ಸಾಂ ಹಾಗೂ ಇತರೆ ಹೊರ ರಾಜ್ಯಗಳ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ತೋಟದ ಮಾಲೀಕರುಗಳು ಪೊಲೀಸ್ ಠಾಣೆಗೆ ಒದಗಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿರುವ ಎಸ್‍ಪಿ ಡಾ.ಸುಮನ್ ಈ ಬಗ್ಗೆ ಯಾರೂ ನಿರ್ಲಕ್ಷ್ಯತನ ತೋರಬಾರದು ಎಂದು ಮನವಿ ಮಾಡಿದ್ದಾರೆ.







