ಬಾಕಿ ಪಿಂಚಣಿ ಬಗ್ಗೆ ವಾರದೊಳಗೆ ತನಿಖೆ ನಡೆಸಿ ಸರಕಾರಕ್ಕೆ ವರದಿ: ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್
ಉಡುಪಿ ತಾಪಂ ಸಾಮಾನ್ಯ ಸಭೆ

ಉಡುಪಿ, ಜ.30: ಆಧಾರ್ ಡುಪ್ಲಿಕೇಶನ್ ಸಮಸ್ಯೆಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಬಿಡುಗಡೆಯಾಗದೆ ಬಾಕಿ ಇರುವ ವಿವಿಧ ಪಿಂಚಣಿಗಳ ಕುರಿತ ತನಿಖೆಯನ್ನು ವಾರದೊಳಗೆ ಪೂರ್ಣಗೊಳಿಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದ್ದಾರೆ.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಇಂದು ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಡಾ.ಸುನೀತಾ ಶೆಟ್ಟಿ, ಉಡುಪಿ ಜಿಲ್ಲೆಯ ಹಲವು ಮಂದಿಯ ವಿವಿಧ ಪಿಂಚಣಿಗಳು ಕಳೆದ ಆರು ತಿಂಗಳುಗಳಿಂದ ಬಾಕಿ ಇದ್ದು, ಇದರಿಂದ ಹಲವು ಮಂದಿ ಸಂಕಷ್ಟದಲ್ಲಿದ್ದಾರೆ. ಆಧಾರ್ ಕಾರ್ಡ್ ಡುಪ್ಲಿಕೇಶನ್ ಸಮಸ್ಯೆಯಿಂದ ಈ ರೀತಿಯಾಗಿರುವುದರಿಂದ ಹಾಸಿಗೆ ಹಿಡಿದ ವೃದ್ಧರು ಕೂಡ ಅಂಚೆ ಕಚೇರಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಉಡುಪಿ ಹಾಗೂ ಕಾಪು ತಾಲೂಕು ಗಳಲ್ಲಿ 343 ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ 829 ಮಂದಿಯ ಪಿಂಚಣಿ ಆಧಾರ್ ಡುಪ್ಲಿಕೇಶನ್ ಸಮಸ್ಯೆಯಿಂದ ಕಳೆದ ಕೆಲವು ತಿಂಗಳುಗಳಿಂದ ಬಾಕಿಯಾಗಿದ್ದು, 25 ಮಂದಿಯ ಪಿಂಚಣಿಯು ರದ್ದಾಗಿದೆ. ಈ ಕುರಿತು ನಡೆಸುತ್ತಿರುವ ತನಿಖೆಯು ಶೇ.90ರಷ್ಟು ಪೂರ್ಣಗೊಂಡಿದ್ದು, ಬಾಕಿ ತನಿಖೆಯನ್ನು ವಾರ ದೊಳಗೆ ಪೂರ್ಣಗೊಳಿಸಿ ಸರಕಾರಕ್ಕೆ ವರದಿಯನ್ನು ಕಳುಹಿಸಿಕೊಡಲಾಗುವುದು ಎಂದರು.
ನೋಂದಾವಣಿ ಕಚೇರಿ ಅವ್ಯವಸ್ಥೆ: ಬ್ರಹ್ಮಾವರ ಉಪನೋಂದಾವಣಿ ಕಚೇರಿಯ ಅವ್ಯವಸ್ಥೆ ವಿರುದ್ಧ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅವರೇ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ ಕೂಡ ಧ್ವನಿಗೂಡಿಸಿದರು.
ಇಲ್ಲಿ ಯಾವುದೇ ನೊಂದಣಿ ಕಾರ್ಯ ಆಗುತ್ತಿಲ್ಲ. ಕಚೇರಿಯಲ್ಲಿ ಉಪ ನೋಂದಾಣಿ ಅಧಿಕಾರಿಯೇ ಇಲ್ಲ. ಸರಿಯಾದ ಕಂಪ್ಯೂಟರ್ ವ್ಯವಸ್ಥೆ ಕೂಡ ಇಲ್ಲ. ಶೌಚಾಲಯ ಸರಿಯಾಗಿ ಇಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ತಾಪಂ ಕಾರ್ಯನಿರ್ವಹಣಾ ಧಿಕಾರಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಸದಸ್ಯ ಧನಂಜಯ್ ಮಾತನಾಡಿ, ಕೇಳಾರ್ಕಳಬೆಟ್ಟು ಸರಕಾರಿ ಶಾಲೆಗಳಲ್ಲಿ ನಾಲ್ಕು ಮತಗಟ್ಟೆಗಳಿದ್ದು, ಅದರಲ್ಲಿ ಎರಡು ಮತಗಟ್ಟೆಯನ್ನು ತೆಂಕನಿಡಿಯೂರು ಸರಕಾರಿ ಕಾಲೇಜಿಗೆ ವರ್ಗಾಯಿಸಬೇಕು. ಇದರಿಂದ ಸ್ಥಳೀಯ ಜನರಿಗೆ ಹತ್ತಿರ ಆಗುತ್ತದೆ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ಈ ಬಗ್ಗೆ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಸಂತ್ರಸ್ತರಿಗೆ ಪರಿಹಾರ ನೀಡಿ: ಪಾದೂರು ತೈಲಾಗಾರ ಕಾಮಗಾರಿ ಸಂದರ್ಭ ಸ್ಫೋಟಗೊಂಡು ಹಾನಿಯಾದ ಮನೆಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್ ದೂರಿದರು.
ಕಳೆದ ವರ್ಷ ಲೋಕೋಪಯೋಗಿ ಇಲಾಖೆಯವರು ಪರಿಶೀಲನೆ ಮಾಡಿ 91 ಮನೆಗಳಿಗೆ ಪರಿಹಾರ ನೀಡುವಂತೆ ವರದಿ ನೀಡಿದ್ದರು. ಆದರೆ ಪರಿಹಾರ ನೀಡಲು ಕಂಪೆನಿ ನಿರಾಕರಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡ ಎರಡು ಮೂರು ಬಾರಿ ಸಭೆ ಕರೆದಿದ್ದಾರೆ. ಇನ್ನೂ ಸರಕಾರ ಮಟ್ಟದಲ್ಲಿ ಈ ಕೆಲಸ ಆಗ ಬೇಕಾಗಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದರು.
ಸದಸ್ಯ ದಿನೇಶ್ ಕೋಟ್ಯಾನ್ ಮಾತನಾಡಿ, ಸಾಸ್ತಾನ ಟೋಲ್‌ಗೇಟ್‌ನಲ್ಲಿ ರುವ ನಿಯಮದಂತೆ ಹೆಜಮಾಡಿ ಟೋಲ್‌ನಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಯ ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು. ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಕ್ರಮ ಮುಂದುವರೆಸಬೇಕು. ಅಲ್ಲಿಯ ವರೆಗೆ ಹೆಜಮಾಡಿ ಒಳ ರಸ್ತೆಯಲ್ಲಿ ನಿರ್ಮಿಸಿರುವ ಟೋಲ್‌ಗೇಟನ್ನು ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಿ., ಕಾರ್ಯನಿರ್ವಹಣಾಧಿಕಾರಿ ರಾಜು ಕೆ., ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮಂಗನಕಾಯಿಲೆ ವರದಿಯಾಗಿಲ್ಲ
ಜಿಲ್ಲೆಯಲ್ಲಿ ಈವರೆಗೆ 95 ಮಂಗಗಳು ಸಾವಿಗೀಡಾಗಿದ್ದು, 30 ಮಂಗಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಅದರ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯ 10 ಶಂಕಿತ ಮಂಗನ ಕಾಯಿಲೆ ಪೀಡಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಇವರಲ್ಲಿ ಮಂಗನ ಕಾಯಿಲೆಯ ಯಾವುದೇ ವೈರಸ್ ಕಂಡುಬಂದಿಲ್ಲ ಎಂದು ಉಡುಪಿ ಆರೋಗ್ಯಾಧಿಕಾರಿ ಡಾ.ನಾಗರತ್ನ ಮಾಹಿತಿ ನೀಡಿದರು. ಮಂಗನ ಕಾಯಿಲೆಯು ಕೇವಲ ಮಂಗನಿಂದ ಮಾತ್ರವಲ್ಲ ದನ, ಅಳಿಲು ಗಳಿಂದಲೂ ಹರಡುತ್ತದೆ. ಇದು ಮನುಷ್ಯರಿಗೂ ತಗಲುವ ರೋಗವಾಗಿದೆ. ಆದರೆ ಈ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಈ ಬಗ್ಗೆ ಆರೋಗ್ಯ, ಅರಣ್ಯ ಇಲಾಖೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವು ಅರಣ್ಯ ಪ್ರದೇಶಗಳಲ್ಲಿ ಮಾಹಿತಿ ಫಲವನ್ನು ಅಳವಡಿಸಲಾಗಿದೆ ಎಂದರು.







