ಲೈಟ್ ಫಿಶಿಂಗ್-ಬುಲ್‌ಟ್ರಾಲ್ ಮೀನುಗಾರಿಕೆ ತಡೆಗೆ ಆಗ್ರಹಿಸಿ ಜ.31ರಿಂದ ಧರಣಿ
ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ವಿಶೇಷ ಮಹಾಸಭೆಯಲ್ಲಿ ನಿರ್ಧಾರ

ಮಂಗಳೂರು,ಜ.30: ಲೈಟ್ ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಮತ್ತು ಬೇಡಿಕೆ ಈಡೇರುವವರೆಗೆ ಬಂದರು ದಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮುಂದೆ ಜ.31ರಿಂದ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಧರಣಿ ನಡೆಸಲು ಸಾಂಪ್ರದಾಯಿಕ ಮೀನುಗಾರರು ನಿರ್ಧರಿಸಿದ್ದಾರೆ.
ದಕ್ಕೆಯಲ್ಲಿ ಬುಧವಾರ ನಡೆದ ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ವಿಶೇಷ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಂಡ ಮೀನುಗಾರರು ಯಾವ ಕಾರಣಕ್ಕೂ ನಿಯಮ ಉಲ್ಲಂಘಿಸಿ ಲೈಟ್‌ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ ಮಾಡಬಾರದು. ಹಾಗೇ ಹೋದರೆ ಸೂಕ್ತ ಕ್ರಮ ಜರುಗಿಸುವ ಜವಾಬ್ದಾರಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳದ್ದಾಗಿದೆ. ಆದರೆ, ಕೆಲವು ಮೀನುಗಾರರು ನಿಯಮ ಉಲ್ಲಂಘಿಸಿ ಲೈಟ್‌ಪಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟರಲ್ಲದೆ, ಸಮಸ್ಯೆಯನ್ನು ನಿಭಾಯಿಸಲು ಇಲಾಖಾಧಿಕಾರಿಗಳು ವಿಶೇಷ ಮುತುವರ್ಜಿವಹಿಸಬೇಕು ಎಂದು ಒತ್ತಾಯಿಸಿದರು.
ವಿಶೇಷ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಿತಿನ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಉಳ್ಳಾಲ್, ಕೋಶಾಧಿಕಾರಿ ಇಬ್ರಾಹೀಂ ಬೆಂಗರೆ, ಜೊತೆ ಕಾರ್ಯದರ್ಶಿ ಸಂದೀಪ್ ಉಪಸ್ಥಿತರಿದ್ದರು
ಡಿಸಿ ಸೂಚನೆ: ಬಂದರು ದಕ್ಕೆಯಲ್ಲಾಗುವ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿಯಮ ಉಲ್ಲಂಘಿಸಿ ಲೈಟ್‌ಫಿಶಿಂಗ್ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕರಾವಳಿ ತಟ ರಕ್ಷಣಾ ಪಡೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.








