ವೈದ್ಯಕೀಯ ಪದ್ಧತಿಯಲ್ಲಿ ಮೇಲು-ಕೀಳು ಎಂಬುದಿಲ್ಲ: ಡಾ.ಎಂ.ಶಾಂತಾರಾಮ ಶೆಟ್ಟಿ
ಸಾಹಿತ್ಯ ಸಮ್ಮೇಳನದಲ್ಲಿ 'ವೈದ್ಯಕೀಯ-ಬದುಕು ಬರಹ' ಗೋಷ್ಠಿ

ಮಂಗಳೂರು, ಜ.30: ವೈದ್ಯಕೀಯ ಪದ್ಧತಿಯಲ್ಲಿ ಮೇಲು ಮತ್ತು ಕೀಳು ಎಂಬುದಿಲ್ಲ. ಅಲೋಪತಿ, ಆರ್ಯುವೇದ, ಹೋಮಿಯೋಪತಿ, ಯೋಗ ಪ್ರಕೃತಿ ಚಿಕಿತ್ಸೆ ಹೀಗೆ ಎಲ್ಲವೂ ಪ್ರಮುಖ ಪದ್ಧತಿಯೇ ಆಗಿದೆ. ರೋಗಿಯನ್ನು ಗುಣಪಡಿಸುವುದೇ ಈ ಎಲ್ಲಾ ಪದ್ಧತಿಯ ಗುರಿಯಾಗಿದೆ. ಯಾವ ಪದ್ಧತಿಯಂತೆ ಚಿಕಿತ್ಸೆ ಪಡಿಸಿಕೊಳ್ಳಬೇಕು ಎಂಬುದು ರೋಗಿಗೆ ಬಿಟ್ಟ ವಿಚಾರವಾಗಿದೆ ಎಂದು ನಗರದ ಖ್ಯಾತ ಮೂಳೆತಜ್ಞ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದರು.
ನಗರದ ಪುರಭವನದಲ್ಲಿ ಜರುಗುತ್ತಿರುವ 23ನೆ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಬುಧವಾರ ನಡೆದ 'ವೈದ್ಯಕೀಯ-ಬದುಕು ಬರಹ' ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ವೈದ್ಯಕೀಯ ಪದ್ಧತಿಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಯಾವ ಪದ್ಧತಿಯ ಮೂಲಕ ರೋಗ ಗುಣಪಡಿಸಲು ಸಾಧ್ಯವೋ ಅದನ್ನು ಬಳಸಿಕೊಳ್ಳಬೇಕು. ಯಾಕೆಂದರೆ ಅವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ. ಈ ಮಧ್ಯೆ ರೋಗಿಯು ರೋಗವನ್ನು ಗೆಲ್ಲಬಲ್ಲೆ ಎಂಬ ಧೈರ್ಯ ತೋರಿದರೆ ತನ್ನಿಂತಾನಾಗಿಯೇ ರೋಗ ಭಾಗಶಃ ವಾಸಿಯಾದಂತೆ ಎಂದ ಡಾ. ಶಾಂತಾರಾಮ ಶೆಟ್ಟಿ, ವೈದ್ಯರು ಕೂಡ ವೃತ್ತಿಯಲ್ಲಿ ಸಾಕಷ್ಟು ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ರೋಗಿಗಳು ಮತ್ತವರ ವಾರಸುದಾರರು ಅರ್ಥಮಾಡಿಕೊಳ್ಳಬೇಕು. ಔಷಧ ಅಥವಾ ಚಿಕಿತ್ಸೆ ನೀಡಿದ ತಕ್ಷಣ ವೈದ್ಯರ ಅಂದಿನ ಕೆಲಸ ಮುಗಿಯಿತು ಎಂದು ಸುಮ್ಮನಿರುವಂತಿಲ್ಲ. ಯಾವುದೇ ಕ್ಷಣ ಎದುರಾಗುವ ವೈದ್ಯಕೀಯ ಸವಾಲುಗಳನ್ನು ಎದುರಿಸುವ ಅನಿವಾರ್ಯತೆಯು ವೈದ್ಯರಿಗೆ ಇದೆ. ರೋಗಗಳಿಗೆ ಕಡಿವಾಣ ಹಾಕಲು ವೈದ್ಯಕೀಯ ಸಾಹಿತ್ಯ ಸೃಷ್ಟಿ ಮತ್ತಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ ಎಂದರು.
ಸುಳ್ಯದ ಸ್ತ್ರೀರೋಗ ತಜ್ಞೆ ಡಾ.ವೀಣಾ ಪಾಲಚಂದ್ರ ಅಲೋಪತಿಯ ಬಗ್ಗೆ, ಆಸರೆ ಚಾರಿಟೇಬಲ್ ಟ್ರಸ್ಟ್‌ನ ಆಯುರ್ವೇದ ತಜ್ಞೆ ಡಾ. ಆಶಾಜ್ಯೋತಿ ರೈ ಆಯುರ್ವೇದದ ಬಗ್ಗೆ, ಧರ್ಮಸ್ಥಳ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವರಾಜ ವಿ. ಪಾಟೀಲ ಯೋಗ ಪ್ರಕೃತಿ ಚಿಕಿತ್ಸೆಯ ಬಗ್ಗೆ, ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ಹೋಮಿಯೋಪತಿ ಬಗ್ಗೆ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷ ಡಾ.ಬಿ.ಎಂ.ಹೆಗ್ಡೆ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
















