ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿದ್ದ ಮಂಗಳೂರು: ಡಾ.ಪೀಟರ್ ವಿಲ್ಸನ್
23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು, ಜ.30: ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗುತ್ತಿರುವ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಬುಧವಾರ ನಡೆದ ‘ಮಂಗಳೂರು: ಇತಿಹಾಸ ಪ್ರಗತಿಯ ಹೆಜ್ಜೆಗಳು’ ಗೋಷ್ಠಿಯಲ್ಲಿ ಮಂಗಳೂರಿನ ಗತ ವೈಭವದ ಅನೇಕ ಮಜಲುಗಳ ವಿಷಯಗಳು ಚರ್ಚಿಸಲ್ಪಟ್ಟವು.
ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಮಂಗಳೂರಿನಲ್ಲಿ ಮೊದಲ ಖಾಕಿ ಕಾವಿ ಬಟ್ಟೆಗಳು ಆರಂಭವಾಗಿದ್ದು, ಮಹಿಳೆಯರ ಸಬಲೀಕರಣಕ್ಕೂ ಮಂಗಳೂರು ನಾಂದಿಯಾಗಿತ್ತು. ಬಾಲಕಿಯರಿಗಾಗಿ ಮೀಸಲಿರುವ ಶಾಲೆಗಳ ಸಂಖ್ಯೆಯೂ ಮಂಗಳೂರಿನಲ್ಲೆ ಹೆಚ್ಚು. ಪ್ರಪಂಚದಲ್ಲಿ ಅತಿ 9 ಹೆಸರುಗಳಿರುವ ಏಕೈಕ ನಗರ ಮಂಗಳೂರು ಆಗಿದೆ ಎಂದರು.
ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ಮಾತನಾಡಿ 1400 ವರ್ಷಗಳ ಮೊದಲೆ ಮಂಗಳೂರು ಅಚ್ಚುಕಟ್ಟಾದ ಸ್ಮಾರ್ಟ್ ಸಿಟಿಯಾಗಿತ್ತೆಂಬ ಪರಿಕಲ್ಪನೆಯನ್ನು ವೇಳ್ವೆಕುಡಿ ಶಾಸನ ನೀಡುತ್ತದೆ. ಕದ್ರಿಯ ಲೋಕೇಶ್ವರ ಪಂಚಲೋಹದ ವಿಗ್ರಹ ಕ್ರಿ.ಶ.968ರಲ್ಲಿ ಸ್ಥಾಪನೆಯಾಗಿದ್ದು, ದಕ್ಷಿಣ ಭಾರತದಲ್ಲಿಯೆ ಪ್ರಮುಖವಾಗಿದೆ ಎಂದರು.
ಮಂಗಳೂರು ವಿವಿಯ ಬ್ರಹ್ಮ ಶ್ರೀನಾರಾಯಣಗುರು ತುಳು ಅಧ್ಯಯನ ಪೀಠ ನಿರ್ದೇಶಕ ಮುದ್ದು ಮೂಡುಬೆಳ್ಳೆ ಮಂಗಳೂರಿಗೆ ಸಾಂಸ್ಕೃತಿಕ ನೆಲೆಯ ಸ್ಪರ್ಶ ನೀಡಿದರು. ಕವಿ ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು. ಎಲ್ಲೂರು ರಾಮಚಂದ್ರ ಭಟ್ ವಂದಿಸಿದರು.







