ಆದಮಾರು ಮಠದ ಪರ್ಯಾಯಕ್ಕೆ ಅಕ್ಕಿ ಮುಹೂರ್ತ

ಉಡುಪಿ, ಜ.30: ಮುಂದಿನ ವರ್ಷದ ಜನವರಿ 18ರ ಮುಂಜಾನೆ ನಡೆಯುವ ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ ಮಹೋತ್ಸವದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಅದಮಾರು ಶ್ರೀಗಳ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಎರಡನೇಯದಾದ ಅಕ್ಕಿ ಮುಹೂರ್ತ ಇಂದು ಬೆಳಗ್ಗೆ ರಥಬೀದಿಯಲ್ಲಿರುವ ಅದಮಾರು ಮಠದಲ್ಲಿ ನಡೆಯಿತು.
ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿ ಯಲ್ಲಿ ಅಕ್ಕಿ ಮುಹೂರ್ತದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರನ್ನು (ಶೀರೂರು ಮಠಕ್ಕಿನ್ನೂ ಉತ್ತರಾಧಿಕಾರಿ ನೇಮಕಗೊಂಡಿಲ್ಲ) ಹೊರತು ಪಡಿಸಿ ಉಳಿದೆಲ್ಲಾ ಆರು ಮಠಗಳ ಶ್ರೀಪಾದರು ಹಾಗೂ ಕಿರಿಯ ಯತಿಗಳು ಇಂದಿನ ಅಕ್ಕಿ ಮುಹೂರ್ತದಲ್ಲಿ ಪಾಲ್ಗೊಂಡರು.
ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಅಕ್ಕಿ ಮುಹೂರ್ತ ಎರಡನೇಯದು. ಕಳೆದ ತಿಂಗಳು ಬಾಳೆಮುಹೂರ್ತ ನಡೆದಿದ್ದು, ಇನ್ನು ಮುಂದೆ ಕಟ್ಟಿಗೆ ಮುಹೂರ್ತ ಹಾಗೂ ಪರ್ಯಾಯಕ್ಕೆ ಒಂದು ತಿಂಗಳು ಮೊದಲು ಭತ್ತ ಮುಹೂರ್ತ ನಡೆಯಲಿಕ್ಕಿವೆ.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಮುಂದೆ ಪರ್ಯಾಯ ಪೀಠವೇರುವ ಅದಮಾರು ಶ್ರೀಗಳೊಂದಿಗೆ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕಾಗಿ ಬೇಕಾದ ಅಕ್ಕಿ ಹಾಗೂ ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕಾಗಿ ಅಕ್ಕಿ ಮುಹೂರ್ತ ನಡೆಯುತ್ತದೆ. ಸಂಪ್ರದಾಯದಂತೆ ಇಂದು ಮುಂಜಾನೆ ರಥಬೀದಿಯಲ್ಲಿರುವ ಅದಮಾರು ಮಠದ ಪಟ್ಟದ ದೇವರು ಕಾಳೀಯ ಮರ್ಧನ ಕೃಷ್ಣನ ಸನ್ನಿಧಿಯಲ್ಲಿ ಅದಮಾರು ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಅನಂತರ ಮಠದ ದಿವಾನರ ನೇತೃತ್ವದಲ್ಲಿ ಊರಿನ ಗಣ್ಯರು, ಮಠದ ಅಭಿಮಾನಿಗಳು ಸಕಲ ಬಿರುದು ಬಾವಲಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಚಂದ್ರವೌಳೀಶ್ವರ, ಶ್ರೀಅನಂತೇಶ್ವರ ದೇವರಿಗೆ ಪಾರ್ಥಿಸಿ, ಬಳಿಕ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರಿಗೆ, ಸರ್ವಜ್ಞ ಪೀಠದಲ್ಲಿರುವ ಶ್ರೀಮಧ್ವಾಚಾರ್ಯರಿಗೆ ಪಾರ್ಥಿಸಲಾಯಿತು.
ಬಳಿಕ ಅದಮಾರು ಮಠದಿಂದ ಸಾಲಂಕೃತವಾದ ಅಕ್ಕಿ ಮುಡಿಗಳನ್ನು ಪಲ್ಲಕ್ಕಿಯಲ್ಲಿರಿಸಿ ತಲೆಹೊರೆಯ ಮೂಲಕ ಬಿರುದು ಬಾವಲಿಗಳೊಂದಿಗೆ ರಥಬೀದಿಗೆ ಪ್ರದಕ್ಷಿಣೆ ಬಂದು ಅದಮಾರು ಮಠದಲ್ಲಿ ಪಟ್ಟದ ದೇವರ ಎದುರು ಅಕ್ಕಿಮುಡಿಯನ್ನಿರಿಸಿ ಆರತಿ ಬೆಳಗುವ ಮೂಲ ಕಾರ್ಯಕ್ರಮ ಸಂಪನ್ನಗೊಂಡಿತು.
ಬಳಿಕ ಆಗಮಿಸಿದ ಎಲ್ಲಾ ಶ್ರೀಪಾದರುಗಳಿಗೆ ಅದಮಾರು ಮಠದ ವತಿಯಿಂದ ನವಗ್ರಹ ದಾನ ಹಾಗೂ ಇತರ ಗೌರವಗಳನ್ನು ಸಮರ್ಪಿಸ ಲಾಯಿತು.ವಿವಿಧ ಮಠದ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಧಾರ್ಮಿಕ ವಿಧಿವಿಧಾನಗಳು ಶಿಬರೂರು ವಾಸುದೇವ ಆಚಾರ್ಯರ ನೇತೃತ್ವದಲ್ಲಿ ನಡೆಯಿತು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಗಳಾಗಿದ್ದರು.







