ಬಾಂಧವ್ಯದ ಮೂಲಕ ಎಲ್ಲರೊಂದಿಗೆ ಪ್ರೀತಿಯಿಂದ ಬಾಳಿ: ಡಾ.ಪೀಟರ್ ಪಾವ್ಲ್

ಕಾರ್ಕಳ, ಜ.30: ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಮಹೋತ್ಸವದ ನಾಲ್ಕನೆಯ ದಿನವಾದ ಬುಧವಾರ ಪ್ರಮುಖ ದಿವ್ಯ ಬಲಿ ಪೂಜೆಯನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೆರವೇರಿಸಿದರು.
ಬಳಿಕ ಪ್ರವಚನ ನೀಡಿದ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ಪ್ರಭು ಯೇಸುವಿನ ದಿವ್ಯ ಬಲಿದಾನ ಮತ್ತು ಪುನರುತ್ಥಾನದ ಮಹಿಮೆಯಲ್ಲಿ ಭಾಗಿಯಾಗಿ, ದೈನಂದಿನ ಜೀವನದಲ್ಲಿ ಪವಿತ್ರತೆಯನ್ನು ಗಳಿಸಲು ಸಾಧ್ಯ. ಪ್ರಭು ಕ್ರಿಸ್ತರು ತೋರಿಸಿಕೊಟ್ಟ ವಿಧೇಯ ಮಾರ್ಗದಲ್ಲಿ ನಡೆದು, ಭಾತ್ರತ್ವದ ಬಾಂಧವ್ಯ ದ ಮೂಲಕ ಎಲ್ಲರೊಡನೆ ಪ್ರೀತಿಯಿಂದ ಬಾಳಬೇಕು. ಆಗ ದೇವರ ಪವಿತ್ರತೆ ಯಲ್ಲಿ ನಾವು ಭಾಗಿಯಾಗಲು ಸಾಧ್ಯ ಎಂದು ಹೇಳಿದರು.
ಸಂಜೆಯ ಕನ್ನಡ ಬಲಿಪೂಜೆಯನ್ನು ನೆರವೇರಿಸಿದ ಬೆಳ್ತಂಗಡಿಯ ಧರ್ಮಾ ಧ್ಯಕ್ಷ ಅತಿ ವಂ.ಡಾ.ಲೋರೆನ್ಸ್ ಮುಕ್ಕುಝ್ಹಿ, ದೇವರ ಮಕ್ಕಳಾದ ನಾವೆಲ್ಲರೂ ದೇವರಂತೆ ಪಾವಿತ್ರತೆಯನ್ನು ಹೊಂದಿ ಬಾಳಲು ಆಹ್ವಾನಪಟ್ಟವರಾಗಿದ್ದೇವೆ. ಸನ್ಮಾರ್ಗದಲ್ಲಿ ಬಾಳಲು ಪ್ರಯತ್ನಿಸಿದಾಗ ನಾವು ಪವಿತ್ರತೆಯನ್ನು ಗಳಿಸಲು ಸಾಧ್ಯ ಎಂದು ತಿಳಿಸಿದರು.
ನಾನು ಪವಿತ್ರನಾಗಿರುವಂತೆ ನೀವೂ ಪವಿತ್ರರಾಗಿರಿ ಎಂಬ ಮಹೋತ್ಸವದ ಧ್ಯೇಯ ವಾಕ್ಯದಡಿಯಲ್ಲಿ ಕೇಂದ್ರಿಕೃತಗೊಂಡು ಇಡೀ ದಿನದ ಬಲಿಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ರಾತ್ರಿವರೆಗೆ ಕೊಂಕಣಿಯಲ್ಲಿ ಎಂಟು ಮತ್ತು ಕನ್ನಡದಲ್ಲಿ ಮೂರು ದಿವ್ಯ ಬಲಿಪೂಜೆಗಳು ನೆರವೇರಿದವು. ಇಡೀ ದಿನ ಸಹಸ್ರಾರು ಸಂಖ್ಯೆಯ ಭಕ್ತರು ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ವಿಧಿ ವಿಧಾನದಲ್ಲಿ ಭಾಗಿಯಾದರು.
ಜ.31 ವಾರ್ಷಿಕ ಹಬ್ಬದ ಕೊನೆಯ ದಿನವಾಗಿದ್ದು, ಬೆಳಗ್ಗೆ 10:30 ಗಂಟೆಗೆ ಹಬ್ಬದ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಲೋಬೊ ನೆರವೇರಿಸಲಿರುವರು. ಇಡೀ ದಿನ 10 ಬಲಿಪೂಜೆಗಳು ನಡೆಯಲಿದ್ದು, ರಾತ್ರಿ 9:30ಕ್ಕೆ ಕೊನೆಯ ಬಲಿಪೂಜೆ ಕೊಂಕಣಿಯಲ್ಲಿ ನಡೆಯಲಿದೆ.







