ಮಿಯಾರ್ ಕಂಬಳ ಕ್ರೀಡಾಂಗಣಕ್ಕೆ ಛಾವಣಿಯುಕ್ತ ಗ್ಯಾಲರಿ

ಉಡುಪಿ, ಜ.30: ಬೆಂಗಳೂರಿನ ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್ (ಬಿಎಚ್‌ಇಎಲ್) ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯಡಿ, ಕಾರ್ಕಳ ತಾಲೂಕಿನ ಮಿಯಾರ್‌ನಲ್ಲಿರುವ ಕಂಬಳ ಕ್ರೀಡಾಂಗಣದ ಸುತ್ತಲೂ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಛಾವಣಿಯುಕ್ತ ಗ್ಯಾಲರಿಯನ್ನು ನಿರ್ಮಿಸಿದೆ.
ಬಿಎಚ್‌ಇಎಲ್-ಐಎಸ್‌ಜಿನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ಆರ್. ಪಟ್ನಾಯಕ್ ಅವರು ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ಯಾಲರಿ ಫಲಕವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ಆರ್. ಪಟ್ನಾಯಕ್, ಬಿಎಚ್ ಇಎಲ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕೈಗೊಂಡಿರುವ ಅನೇಕ ಯೋಜನೆಗಳ ಬಗ್ಗೆ ಉಲ್ಲೇಖಿಸಿದರು. ಬಿಎಚ್‌ಇ ಎಲ್‌ನ ಡಿಜಿಎಂ ಹಾಗೂ ಸಿಎಸ್‌ಆರ್ ಸಂಯೋಜಕ ಜೆ.ಜಾನ್ ಅಂಬ್ರೋಸ್ ಉಸ್ಥಿತರಿದ್ದರು.
ಮಿಯಾರು ಕಂಬಳ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಕೋಟಿ ರೂ.ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ನಡೆಸಿದ್ದು, ಇದರಲ್ಲಿ ಬಿಎಚ್‌ಇಎಲ್ ಗ್ಯಾಲರಿ ನಿರ್ಮಾಣಕ್ಕಾಗಿ 25 ಲಕ್ಷ ರೂ.ಗಳನ್ನು ತನ್ನ ಸಿಎಸ್‌ಆರ್ ನಿಧಿಯಿಂದ ಒದಗಿಸಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್ ತಿಳಿಸಿದರು.









