ಉಡುಪಿ: 4 ಮಂಗಗಳ ಶವ ಪತ್ತೆ

ಉಡುಪಿ, ಜ.30: ಜಿಲ್ಲೆಯ ವಿವಿದೆಡೆಗಳಲ್ಲಿ ಬುಧವಾರ ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಇವುಗಳಲ್ಲಿ ಎರಡು ಹೆಬ್ರಿ ಹಾಗೂ ವಂಡ್ಸೆಯಲ್ಲಿ ಪತ್ತೆಯಾಗಿದೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇವುಗಳಲ್ಲಿ ಹೆಬ್ರಿಯಲ್ಲಿ ಸಿಕ್ಕಿದ ಎರಡು ಮಂಗಗಳ ಪೋಸ್ಟ್‌ಮಾರ್ಟಂ ನಡೆಸಿ ವಿಸೇರಾವನ್ನು ಪರೀಕ್ಷೆಗೆ ಮಣಿಪಾಲ ಹಾಗೂ ಶಿವಮೊಗ್ಗಗಳಿಗೆ ಕಳುಹಿಸಲಾಗಿದೆ. ಶಂಕಿತ ಮಂಗನ ಕಾಯಿಲೆಗಾಗಿ ಯಾವುದೇ ಮಾನವ ರಕ್ತವನ್ನು ಇಂದು ಪರೀಕ್ಷೆಗಾಗಿ ಕಳುಹಿಸಿಲ್ಲ. ಈವರೆಗೆ ಪರೀಕ್ಷೆಗೆ ಕಳುಹಿಸಿದ 11 ಸ್ಯಾಂಪಲ್‌ಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿಲ್ಲ ಎಂದವರು ಹೇಳಿದರು.
ಮಂಗಳವಾರದಿಂದ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ಒಟ್ಟು 235 ಮಂದಿಗೆ ಮಂಗನ ಕಾಯಿಲೆ ವಿರುದ್ಧ ಬಳಸುವ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ಅರಣ್ಯ ಇಲಾಖೆ, ಎಎನ್‌ಎಫ್ ಹಾಗೂ ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳು ಸೇರಿದ್ದಾರೆ. ಮುಂದೆ ಇನ್ನಷ್ಟು ವ್ಯಾಕ್ಸಿನ್ ಬಂದಾಗ ಕಾಡುತ್ಪತ್ತಿ ಸಂಗ್ರಹಕ್ಕಾಗಿ ಕಾಡಿಗೆ ತೆರಳುವವರು, ಕಾಡಿನಲ್ಲೇ ವಾಸಿಸುವ ಕೊರಗರು ಹಾಗೂ ಹಸ್ಲರಿಗೆ ಆದ್ಯತೆ ಮೇಲೆ ಲಸಿಕೆಯನ್ನು ನೀಡಲಾಗುವುದು ಎಂದು ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ.ನಾಗ ಭೂಷಣ ಉಡುಪ ತಿಳಿಸಿದ್ದಾರೆ.







