ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮಕ್ಕಳ ಆಶ್ರಯಧಾಮದ ಮ್ಯಾನೇಜರ್ ಬಂಧನ

ಚೆನ್ನೈ, ಜ.30: ಅಪ್ರಾಪ್ತ ವಯಸ್ಸಿನ 15ಕ್ಕೂ ಹೆಚ್ಚು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತಿರುವನ್ನಮಲೈ ಜಿಲ್ಲೆಯ ಮಕ್ಕಳ ಆಶ್ರಯಧಾಮದ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ರಮಣನಗರದ ‘ಅರುಣೈ ಚಿಲ್ಡ್ರನ್ಸ್ ಹೋಮ್’ನ ಮ್ಯಾನೇಜರ್ 30 ವರ್ಷದ ವಿನೋದ್ ಕುಮಾರ್ ಬಂಧಿತ ವ್ಯಕ್ತಿ. ಆಶ್ರಯಧಾಮದ ಮಕ್ಕಳಿಗೆ ಆಯೋಜಿಸಲಾಗಿದ್ದ ‘ಬಿಗ್ ವರ್ಲ್ಡ್’ ಹೆಸರಿನ ಕಾರ್ಯಕ್ರಮದಲ್ಲಿ ಪ್ರತೀ ಮಕ್ಕಳಿಗೂ ಮರುಮಾಹಿತಿ(ಫೀಡ್‌ಬ್ಯಾಕ್) ಫಾರಂ ನೀಡಲಾಗಿದ್ದು, ಇದರಲ್ಲಿ ಒಬ್ಬಳು ಬಾಲಕಿ ತನಗೆ ಮ್ಯಾನೇಜರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಕೆಎಸ್ ಕಂದಸಾಮಿ ತಿಳಿಸಿದ್ದಾರೆ.
ಬಳಿಕ ನಡೆಸಿದ ಪ್ರಾಥಮಿಕ ವಿಚಾರಣೆಯ ವೇಳೆ ಮ್ಯಾನೇಜರ್ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದ ಮತ್ತು ತಮ್ಮ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂದು ಬಾಲಕಿಯರು ತಿಳಿಸಿದ್ದಾರೆ. ಬಾಲಕಿಯರನ್ನು ಮತ್ತೊಂದು ಮಕ್ಕಳಧಾಮಕ್ಕೆ ಸ್ಥಳಾಂತರಿಸಲಾಗಿದ್ದು ಅರುಣೈ ಚಿಲ್ಡ್ರನ್ಸ್ ಹೋಮ್‌ಗೆ ಬೀಗಮುದ್ರೆ ಹಾಕಲಾಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಬೀಗ ಜಡಿಯಲ್ಪಟ್ಟ ಮೂರನೇ ಮಕ್ಕಳ ಆಶ್ರಯಧಾಮ ಇದಾಗಿದೆ. ಈ ಹಿಂದೆ ಎರಡು ಆಶ್ರಧಾಮಗಳಿಗೆ ಧಾಳಿ ನಡೆಸಿ ಅಲ್ಲಿದ್ದ 19 ಮತ್ತು 50 ಮಕ್ಕಳನ್ನು ರಕ್ಷಿಸಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







