ಲಂಚ, ಸುಲಿಗೆ: ಪೊಲೀಸ್ ಇನ್ಸ್‌ಪೆಕ್ಟರ್, ಮೂವರು ಪತ್ರಕರ್ತರ ಬಂಧನ
ನೊಯ್ಡ್, ಜ. 30: ಲಂಚ ಹಾಗೂ ಸುಲಿಗೆ ಆರೋಪದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಪತ್ರಕರ್ತರನ್ನು ಬಂಧಿಸಲಾಗಿದೆ. ನೋಯ್ಡ್‌ದ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಈ ಘಟನೆ ವರದಿ ಯಾಗಿದೆ. ಈ ಪ್ರದೇಶದಲ್ಲಿರುವ ಕಾಲ್‌ಸೆಂಟರ್‌ನಿಂದ 8 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಪಂತ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಪತ್ರಕರ್ತರನ್ನು ಸುಶೀಲ್ ಪಂಡಿತ್, ಉದಿತ್ ಗೋಯಲ್ ಹಾಗೂ ರಾಮನ್ ಠಾಕೂರ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ದಾಖಲಿಸಲಾದ ಪ್ರಕರಣದ ಪ್ರಥಮ ಮಾಹಿತಿ ವರದಿಯಲ್ಲಿ ಹೆಸರಿಸಲಾದ ಕಾಲ್ ಸೆಂಟರ್ ಮಾಲಕನ ಹೆಸರನ್ನು ತೆಗೆದು ಹಾಕಲು ಹಣ ಬೇಡಿಕೆ ಒಡ್ಡಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಪತ್ರಕರ್ತನೊಬ್ಬನಿಂದ ಮರ್ಸಿಡಸ್ ಬೆಂಝ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಕೆಲವು ಕ್ರಿಮಿನಲ್ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವಂತೆ ಕಾಣುತ್ತದೆ. ಪತ್ರಕರ್ತರಿಂದ 8 ಲಕ್ಷ ರೂ. ನಗದು ಹಾಗೂ ಒಂದು ಪಿಸ್ತೂಲ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.