ಮೋದಿ ರಾಮ, ರಾಹುಲ್ ರಾವಣ, ಪ್ರಿಯಾಂಕ ಶೂರ್ಪನಖಿ ಎಂದ ಬಿಜೆಪಿ ಶಾಸಕ

ಬಲ್ಲಿಯಾ (ಉತ್ತರಪ್ರದೇಶ), ಜ. 30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ರಾವಣ’, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ‘ಶೂರ್ಪನಖಿ’ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕರೆದಿದ್ದಾರೆ. ರಾಹುಲ್ ಗಾಂಧಿ ಅವರನ್ನು ರಾಮನಂತೆ ಚಿತ್ರಿಸಿದ ಪೋಸ್ಟರ್‌ಗಳು ಲಕ್ನೋದಲ್ಲಿ ಕಂಡು ಬಂದ ಗಂಟೆಗಳ ಬಳಿಕ ಸುರೇಂದ್ರ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಉತ್ತರಪ್ರದೇಶದ ರೋಹಾನಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಕಾಂಗ್ರೆಸ್ ಪಕ್ಷ ಒಡೆದ ಹಡಗಿನಂತೆ. ಆದುದರಿಂದ ಅದು ಮುಂಬರುವ ವಿಧಾನ ಸಭೆಯಲ್ಲಿ ಜಯ ಗಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ‘‘ಲಂಕೆಗಾಗಿ ರಾಮ ರಾವಣರ ನಡುವೆ ಯುದ್ಧ ನಡೆಯುವುದಕ್ಕಿಂತ ಮುನ್ನ ರಾವಣ ತನ್ನ ತಂಗಿ ಶೂರ್ಪನಖಿಯನ್ನು ಕಳುಹಿಸಿರುವುದು ಎಲ್ಲರೂ ತಿಳಿದಿರುವ ವಿಚಾರ. ಇದು (ಮುಂಬರುವ ಲೋಕಸಭಾ ಚುನಾವಣೆ) ಅದರಂತೆ ಕಾಣುತ್ತದೆ. ರಾಹುಲ್ ಅವರು ರಾವಣನ ಪಾತ್ರ ವಹಿಸಿದ್ದಾರೆ. ರಾಮನ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ.’’ ಎಂದು ಸಿಂಗ್ ತಿಳಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಮುಖ್ಯ ರಣಕಣವಾದ ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್‌ನ ಕಾರ್ಯದರ್ಶಿಯನ್ನಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕಳೆದ ವಾರ ನಿಯೋಜಿಸಲಾಗಿತ್ತು.
‘‘ಪ್ರಧಾನಿ ಮೋದಿ ರಾಮ ಹಾಗೂ ರಾಜಕೀಯಕ್ಕೆ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ತಂದ ರಾಹುಲ್ ಗಾಂಧಿ ರಾವಣ. ರಾಮನೇ ಜಯ ಗಳಿಸುತ್ತಾನೆ ಎಂಬುದು ಜನರಿಗೆ ತಿಳಿದಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿಯಾಗಲಿದ್ದಾರೆ ಅದರಲ್ಲಿ ಯಾವುದೇ ಸಂಶಯ ಇಲ್ಲ’’ ಎಂದು ಸಿಂಗ್ ಹೇಳಿದ್ದಾರೆ.





