ವಿದೇಶಿ ವಿನಿಯಮ ಕಾಯ್ದೆ ಉಲ್ಲಂಘನೆ : ಪಾಕ್ ಗಾಯಕ ರಾಹತ್ ಫತೇಹ್ ಅಲಿ ಖಾನ್‌ಗೆ ಇಡಿ ನೋಟಿಸ್
ಹೊಸದಿಲ್ಲಿ, ಜ. 30: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಹಾಡುಗಾರ ರಾಹತ್ ಫತೇಹ್ ಅಲಿ ಖಾನ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸು ಜಾರಿ ಮಾಡಿದೆ. ಪ್ರಕರಣದ ತನಿಖೆ ಇತ್ತೀಚೆಗೆ ಪೂರ್ಣಗೊಂಡ ಬಳಿಕ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಪೆಮಾ) ಅಡಿಯಲ್ಲಿ 2 ಕೋ. ರೂ. ಫೋರೆಕ್ಸ್ ನಿಧಿಯನ್ನು ಉಲ್ಲಂಘಿಸಿರುವುದಕ್ಕೆ ನೋಟಿಸ್ ನೀಡಲಾಗಿದೆ. ನೋಟಿಸಿಗೆ ಮುಂದಿನ 45 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಖಾನ್ ಅವರಿಗೆ ಸೂಚಿಸಲಾಗಿದೆ.
ಅಘೋಷಿತ 1.24 ಲಕ್ಷ ಅಮೆರಿಕನ್ ಡಾಲರ್ ಹಾಗೂ ಇತರ ಕೆಲವು ಉಪಕರಣಗಳನ್ನು ವಿದೇಶಿ ಕರೆನ್ಸಿಯಲ್ಲಿ ಕೊಂಡಯ್ಯುತ್ತಿದ್ದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2011ರಲ್ಲಿ ಖಾನ್ ಹಾಗೂ ಅವರ ಮ್ಯಾನೇಜರ್ ಮರೌಫ್ ಅಲಿ ಖಾನ್ ಅವರನ್ನು ಕಂದಾಯ ಬೇಹುಗಾರಿಕೆಯ ನಿರ್ದೇಶನಾಲಯ ತಪಾಸಣೆಗೆ ಒಳಪಡಿಸಿತ್ತು. ಅನಂತರ ಅವರಿಬ್ಬರ ವಿರುದ್ಧ ಫೆಮಾ ಅಡಿಯಲ್ಲಿ ತನಿಖೆ ಆರಂಭಿಸಿತ್ತು.
Next Story





