ಯುವಕರಿಗೆ ಗಾಂಜಾ ಮಾರಾಟ: ಆರೋಪಿಯ ಸೆರೆ
ಗಾಂಜಾ ಸಹಿತ 47,750 ರೂ. ಮೌಲ್ಯದ ಸೊತ್ತು ವಶ

ಮಂಗಳೂರು, ಜ.30: ಯುವಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಹಳೇ ಬಂದರಿನ ಪೋರ್ಟ್ ರಸ್ತೆಯಲ್ಲಿ ಬಂಧಿಸಿ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂದರ್ ಅನ್ಸಾರಿ ಕ್ರಾಸ್ ರಸ್ತೆಯ ಅಬ್ದುಲ್ ರಹೀಂ ಯಾನೆ ಗೂಡ್ಸ್ ರಹೀಂ (40) ಬಂಧಿತ ಆರೋಪಿ. ಆರೋಪಿಯು ಈ ಹಿಂದೆ ಹಲವು ಗಾಂಜಾ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಆರೋಪಿಯಿಂದ ಸುಮಾರು 44 ಸಾವಿರ ರೂ. ಮೌಲ್ಯದ 1.100 ಕೆಜಿ ಗಾಂಜಾ, ಎರಡು ಮೊಬೈಲ್ ಫೋನ್‌ಗಳು ಹಾಗೂ ನಗದು ರೂ. 2,250 ಹೀಗೆ ಒಟ್ಟು 47,750 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಈತನು ಗಾಂಜಾವನ್ನು ಸಣ್ಣಸಣ್ಣ ಪ್ಯಾಕೆಟ್‌ಗಳಲ್ಲಿ ಹಾಕಿ ಅದನ್ನು ಮಂಗಳೂರು ನಗರದ ಕಾಲೇಜು ಹಾಗೂ ವಿದ್ಯಾಸಂಸ್ಥೆಗಳ ಬಳಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು ಎಂದು ಆರೋಪಿಸಲಾಗಿದೆ.
ವಿವಿಧ ಪ್ರಕರಣ: ಅಬ್ದುಲ್ ರಹೀಂ ಯಾನೆ ಗೂಡ್ಸ್ ರಹೀಂ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 7 ಪ್ರಕರಣ ದಾಖಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ, ಪಣಂಬೂರು, ಬರ್ಕೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ತಲಾ ಒಂದು ಪ್ರಕರಣ ಹೀಗೆ ಒಟ್ಟು 11 ಪ್ರಕರಣ ದಾಖಲಾಗಿವೆ. ಅಲ್ಲದೇ ಗೂಂಡಾ ಕಾಯ್ದೆಯಡಿಯಲ್ಲಿ ಸುಮಾರು ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿದ್ದನು.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗದ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಪಿ ಎಂ.ಎ. ಉಪಾಸೆ, ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್‌ಸುಂದರ್, ಕಬ್ಬಾಳ್‌ರಾಜ್ ಎಚ್.ಡಿ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.







