ಸಾಹಿತ್ಯವು ಆತ್ಮಸ್ಥೈರ್ಯದ ಜೊತೆಗೆ ಪ್ರೀತಿಯ ಸಂದೇಶ ನೀಡುತ್ತದೆ: ಲೇಖಕಿ ಚಂದ್ರಕಲಾ ನಂದಾವರ
ಮಂಗಳೂರು, ಜ.30: ಸಾಹಿತ್ಯವು ಅನ್ಯಾಯದ, ಶೋಷಣೆ ವಿರುದ್ಧ ಧ್ವನಿಯೆತ್ತಲು ಧೈರ್ಯವನ್ನು, ಆತ್ಮಸ್ಥೈರ್ಯ ನೀಡುವುದರ ಜತೆಗೆ ಪ್ರೀತಿಯ ಸಂದೇಶವನ್ನು ನೀಡುತ್ತದೆ ಎಂದು ಹಿರಿಯ ಲೇಖಕಿ ಚಂದ್ರಕಲಾ ನಂದಾವರ ಅಭಿಪ್ರಾಯಪಟ್ಟರು.
ನಗರದ ಕುದ್ಮುಲ್ ರಂಗರಾವ್ ಪುರಭವನದ ಕಮಲಾದೇವಿ ಚಟ್ಟೋಪಧ್ಯಾಯ ಸಭಾಂಗಣದ ಬಿ.ಎಂ.ಇದಿನಬ್ಬ ವೇದಿಕೆಯಲ್ಲಿ ಬುಧವಾರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾವ್ಯವು ಕವಿಗೆ ಯಶಸ್ಸು, ಸಂಪತ್ತು, ವ್ಯವಹಾರ ಅನುಭವವನ್ನು ನೀಡುತ್ತದೆ ಹಾಗೂ ಕೆಟ್ಟ ಗುಣಗಳನ್ನು ನಾಶ ಮಾಡುತ್ತದೆ ಎಂದು ಚಂದ್ರಕಲಾ ನಂದಾವರ ನುಡಿದರು.
ಕರ್ಣಾಟಕ ಬ್ಯಾಂಕ್‌ನ ಮುಖ್ಯಸ್ಥ ಪಿ.ಜಯರಾಮ್ ಭಟ್, ಸಮ್ಮೇಳನದ ಅಧ್ಯಕ್ಷ ಬಿ.ಎಂ.ಹೆಗ್ಡೆ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.
ಎಂ.ಡಿ.ಮಂಚಿ ವಾಚಿಸಿದ ವ್ಯಸನಿಯಾಗದಂತೆ ಪ್ರೇರೇಪಿಸುವ ವ್ಯಸನ ಮುಕ್ತಭಾರತ ಕವಿತೆಗೆ ಚಪ್ಪಾಳೆಯ ಸುರಿಮಳೆ ಬಿತ್ತು. ಶಬೀನಾ ವೈ.ಕೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಅಣಕಿಸುವ ರಾಜಕೀಯ ಕನಸು ಕವಿತೆಯು ಗಮನಸೆಳೆಯಿತು
ಕವಿಗೋಷ್ಠಿಯಲ್ಲಿ ಪ್ರಸ್ತುತ ಸಾಮಾಜಿಕ ಏರಿಳಿತಗಳು ಹಾಗೂ ಹೆಣ್ತನದ ತುಮುಲಗಳ ಕುರಿತಂತೆ ಸದಾನಂದ ಮುಂಡಾಜೆ, ಅ.ನಾ.ಪೂರ್ಣಿಮಾ, ಶಶಿಲೇಖಾ ಬಿ, ವಿಶ್ವನಾಥ್ ಕುಲಾಲ್, ಸುಮಾಶ್ರೀನಾಥ್, ಮಮತಾ ಕಿರಣ್, ಶಾಂತಪ್ಪ ಬಾಬು, ಕಾವ್ಯಾ ಶೆಟ್ಟಿ, ಸಲೀಂ ಮಾಣಿ, ಅಶ್ವಿನಿ ಕೋಡಿಬೈಲ್, ಫೆಲ್ಸಿ ಪಿಂಟೊ, ಸಹನಾ ಕಾಂತಬೈಲು, ರೇಷ್ಮಾ ಭಟ್ ಅಜಕ್ಕಳ, ಶ್ಯಾಮಲಾ ಮಾಧವ, ಯು. ಸುಬ್ರಾಯ ಗೌಡ ಸ್ವರಚಿತ ಕವಿತೆಗಳನ್ನು ವಾಚಿಸಿದರು.







