ಟಿಪ್ಪರ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಮಣಿಪಾಲ, ಜ.30: ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿರುವ ಉಡುಪಿ ಕಾಲೇಜ್ ಆಫ್ ನರ್ಸಿಂಗ್ ಸಮೀಪ ಇಂದು ಬೆಳಗ್ಗೆ ಟಿಪ್ಪರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿ ಯಾಗಿದೆ.
ಮೃತರನ್ನು ಹಾವಂಜೆ ಕುಕ್ಕೆಹಳ್ಳಿಯ ಶಶಿರಾಜ್(29) ಎಂದು ಗುರುತಿಸಲಾಗಿದೆ. ಇವರು ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಉದಯ ಅಲುಮಿನಿಯಂನಲ್ಲಿ ಉದ್ಯೋಗಿಯಾಗಿದ್ದರು. ಮಣಿಪಾಲದಿಂದ ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಹೋಗುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಇದರ ಪರಿಣಾಮ ರಸ್ತೆಗೆ ಬಿದ್ದ ಶಶಿರಾಜ್ ಮೈಮೇಲೆ ಟಿಪ್ಪರ್ ಹರಿದು ಹೋಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಶಶಿರಾಜ್ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





