‘ಏರೋ ಇಂಡಿಯಾ-2019’ ಯಶಸ್ಸಿಗೆ ಸಕಲ ಸಿದ್ಧತೆ: ರಾವುರಿ ಶೀತಲ್

ಬೆಂಗಳೂರು, ಜ.30: ರಾಜಧಾನಿ ಬೆಂಗಳೂರಿನಲ್ಲಿ ಫೆ.20 ರಿಂದ 24ರವರೆಗೆ ನಡೆಯಲಿರುವ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಯಲಹಂಕ ವಾಯು ಸೇನಾ ನೆಲೆಯ ಏರ್ ಕಮಾಂಡಿಂಗ್ ಅಧಿಕಾರಿ ರಾವುರಿ ಶೀತಲ್ ತಿಳಿಸಿದರು.
ಗುರುವಾರ ನಗರದ ಯಲಹಂಕದಲ್ಲಿರುವ ವಾಯು ಸೇನಾ ನೆಲೆಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2017ರಲ್ಲಿ ನಡೆದಿದ್ದ ವೈಮಾನಿಕ ಪ್ರದರ್ಶನದಲ್ಲಿ 5.40 ಲಕ್ಷ ಜನ ಪಾಲ್ಗೊಂಡಿದ್ದರು. ಪ್ರತಿ ದಿನ ಸರಾಸರಿ 1.25 ಲಕ್ಷ ಜನ ಭೇಟಿ ನೀಡಿದ್ದರು ಎಂದರು.
ವೈಮಾನಿಕ ಪ್ರರ್ದಶನಕ್ಕೆ ಯಲಹಂಕ ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಈ ಬಾರಿಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಈವರೆಗೆ ದೇಶ, ವಿದೇಶಗಳ ಸುಮಾರು 360 ಕಂಪೆನಿಗಳು ನೋಂದಣಿ ಮಾಡಿಸಿಕೊಂಡಿವೆ. ಯಾವ ಯಾವ ದೇಶಗಳು, ತಮ್ಮ ಯಾವ ಯುದ್ಧ ವಿಮಾನಗಳನ್ನು ಇಲ್ಲಿ ಪ್ರದರ್ಶಿಸಲಿವೆ ಎಂಬ ವಿವರವನ್ನು ರಕ್ಷಣಾ ಇಲಾಖೆ ನೀಡುತ್ತದೆ ಎಂದು ಅವರು ಹೇಳಿದರು.
ಈ ಬಾರಿಯ ಪ್ರದರ್ಶನದಲ್ಲಿ ಡ್ರೋಣ್ ಒಲಿಂಪಿಕ್ಸ್, ಛಾಯಾಚಿತ್ರ ಸ್ಪರ್ಧೆ, ವಿದ್ಯಾರ್ಥಿಗಳ ಚರ್ಚಾಕೂಟ, ನವೋದ್ಯಮಗಳ ಸವಾಲುಗಳು ವಿಚಾರ ಸಂಕಿರಣ, ಮಹಿಳಾ ದಿನಾಚರಣೆಯನ್ನು ಆಚರಿಸಲು ಉದ್ದೇಶಿಸಲಾಗಿದೆ. ಮಹಿಳಾ ದಿನಾಚರಣೆಯಲ್ಲಿ ಅಮೆರಿಕಾದ ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು. ಪ್ರತಿದಿನ 10 ಸಾವಿರ ವಿದ್ಯಾರ್ಥಿಗಳಿಗೆ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ವೈಮಾನಿಕ ಪ್ರದರ್ಶನವು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ರಾವುರಿ ಶೀತಲ್ ತಿಳಿಸಿದರು.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುವ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ಲಕ್ಷಾಂತರ ಜನ ಈ ಪ್ರದರ್ಶನ ವೀಕ್ಷಿಸಲು ಆಗಮಿಸುವ ಹಿನ್ನೆಲೆಯಲ್ಲಿ ಸಹಜವಾಗಿ ಸುತ್ತಮುತ್ತಲು ಸಂಚಾರ ದಟ್ಟಣೆ ಹೆಚ್ಚಿರುತ್ತದೆ ಎಂದು ಅವರು ಹೇಳಿದರು.
ಈ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್ ಹಾಗೂ ಇತರ ಸಂಸ್ಥೆಗಳ ಎಲ್‌ಯುಎಚ್-1, ಎಎಲ್‌ಎಚ್‌ಎಂಕೆ 4-1, ಎಲ್‌ಸಿಎ-2, ಜಿಎಲ್‌ಜೆ 3x1-1, ಎಚ್135-1, ಎಚ್145-1, ಸಿ295-1, ಫಾಲ್ಕನ್ ಬಿಎಕ್ಸ್-1, ರಫೇಲ್-1, ನ್ಯಾನೋಲೈಟ್ ಎಸಿ-1 ಸೇರಿದಂತೆ ಒಟ್ಟು 11 ವಿಮಾನಗಳು ಪ್ರದರ್ಶನಗೊಳ್ಳಲಿವೆ ಎಂದು ರಾವುರಿ ಶೀತಲ್ ತಿಳಿಸಿದರು.
ಡಕೋಟಾ, ಮಿಗ್ 27, ಮಿಗ್ 21, ಎಸ್‌ಸಿಎ, ಮಿಗ್ 29, ಜಾಗ್ವರ್, ಮಿರಾಜ್ 2000, ಸೂ-30 ಎಂಕೆ, ಎಂ-17ವಿ5, ಎಎಲ್‌ಎಚ್‌ಎಂಕೆ-4 ವಿಮಾನಗಳು ಪ್ರದರ್ಶನ ನೀಡಲಿವೆ. ಅಲ್ಲದೆ, ಸರಸ್, ಸಾರಂಗ್, ಲಾಂಗ್ ಇಝೆಡ್, ರಫೇಲ್, ಹಂಸಾ-3, ಎಂಬ್ರಾರ್(ಡಿಆರ್‌ಡಿಓ) ಹಾಗೂ ಎಎನ್132 ವಿಮಾನಗಳು ಪ್ರದರ್ಶನ ನೀಡಲಿವೆ ಎಂದು ಹೇಳಿದರು.
ವೈಮಾನಿಕ ಪ್ರದರ್ಶನಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ರಾಜ್ಯ ಸರಕಾರ, ಕೇಂದ್ರ ಸರಕಾರ, ಕೇಂದ್ರ ಮೀಸಲು ಪಡೆ, ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಇನ್ನಿತರ ಸಂಸ್ಥೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸಾರ್ವಜನಿಕರ ವಾಹನ ನಿಲುಗಡೆ, ಫುಡ್‌ಕೋರ್ಟ್, ವಸ್ತು ಪ್ರದರ್ಶನ ಸ್ಥಳಗಳ ನಿರ್ವಹಣೆಗೆ ನುರಿತ ಹಾಗೂ ಅನುಭವ ಇರುವ ಸಂಸ್ಥೆಗಳನ್ನು ನೇಮಿಸಲಾಗಿದೆ ಎಂದು ರಾವುರಿ ಶೀತಲ್ ತಿಳಿಸಿದರು.
ಸಾರ್ವಜನಿಕರು ವೈಮಾನಿಕ ಪ್ರದರ್ಶನದ ಟಿಕೆಟ್‌ಗಳನ್ನು ಇಲ್ಲಿನ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯುವ ಬದಲು, ಆನ್‌ಲೈನ್ ಮೂಲಕ ಪಡೆದುಕೊಳ್ಳುವುದು ಉತ್ತಮ. ಇದರಿಂದ, ಅನಗತ್ಯವಾಗಿ ಜನಸಂದಣಿ ಉಂಟಾಗುವುದು ತಪ್ಪುತ್ತದೆ ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರೂಪ್ ಕ್ಯಾಪ್ಟನ್ ಎಸ್.ಕೆ.ಸಾಹು ಹಾಗೂ ವಿಂಗ್ ಕಮಾಂಡರ್ ಅಮಿತ್‌ಕುಮಾರ್ ಉಪಸ್ಥಿತರಿದ್ದರು.







