‘ನರೇಗಾ ಕೂಲಿ ಹಣ ಬಿಡುಗಡೆ ಮಾಡದಿರುವುದು ಅಧೋಗತಿಯ ಸಂಕೇತ’: ಕೇಂದ್ರದ ವಿರುದ್ಧ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ

ಬೆಂಗಳೂರು, ಜ. 30: ಉದ್ಯಮಿಗಳ ಸಾಲಮನ್ನಾಕ್ಕೆ ಆಸ್ಥೆ ವಹಿಸುವ ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡದೆ ಸಬೂಬು ಹೇಳುತ್ತಿರುವುದು ರಾಜಕೀಯ ಅಧೋಗತಿಯ ಸಂಕೇತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಟೀಕಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 1,800 ಕೋಟಿ ರೂ. ಬಾಕಿ ಬರಬೇಕಿದೆ. ಆ ಪೈಕಿ 800 ಕೋಟಿ ರೂ.ಗಳಷ್ಟು ಕೇಂದ್ರ ಸರಕಾರ ನೇರವಾಗಿ ಕೂಲಿ ಕಾರ್ಮಿಕರ ಖಾತೆಗೆ ಬಿಡುಗಡೆ ಮಾಡಬೇಕಿದ್ದ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಕೂಲಿ ಕಾರ್ಮಿಕರಿಗೆ ಅನ್ಯಾಯ ಆಗಬಾರದೆಂದು ಸಿಎಂ ಕುಮಾರಸ್ವಾಮಿ 500 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಆದರೆ, ಆ ಮೊತ್ತವನ್ನು ಕೇಂದ್ರ ಸರಕಾರದ ಮೂಲಕವೇ ನೀಡಬೇಕೆಂಬ ನಿಯಮಾವಳಿ ನೆಪದಲ್ಲಿ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬರ ಅಧ್ಯಯನ ನೆಪದಲ್ಲಿ ರಾಜ್ಯದಲ್ಲಿ ಬಿಜೆಪಿ ನಾಯಕರು ಪ್ರವಾಸ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ರಾಜ್ಯದ ಬರ ಪರಿಹಾರಕ್ಕೆ 949 ಕೋಟಿ ರೂ.ನೀಡಿದ್ದು, ಮಹಾರಾಷ್ಟ್ರಕ್ಕೆ 4,200 ಕೋಟಿ ರೂ.ಗಳನ್ನು ನೀಡುವ ಮೂಲಕ ರಾಜ್ಯದ ರೈತರು ಹಾಗೂ ಜನರಿಗೆ ಅನ್ಯಾಯ ಮಾಡಿದೆ.
ಕರ್ನಾಟಕದಲ್ಲಿ ಅಧಿಕಾರ ದಕ್ಕಲಿಲ್ಲವೆಂಬ ರಾಜಕೀಯ ಕಾರಣಕ್ಕಾಗಿ ಬರ ಪರಿಹಾರ ಕಾರ್ಯಕ್ಕೆ ಅನುದಾನ ವಿತರಣೆಯಲ್ಲಿ ಅನ್ಯಾಯ ಮಾಡಲಾಗಿದೆ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಟೀಕಿಸಿದರು.







