ಮೊಬೈಲ್ ಕಳವು ಆರೋಪ ಪ್ರಕರಣ: ಐಪಿಎಸ್ ಅಧಿಕಾರಿ ಡಿ.ರೂಪಾ ನಡೆಗೆ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಜ.30: ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಮೊಬೈಲ್ ಕಳವು ಮಾಡಿದ್ದ ಆರೋಪ ಸಂಬಂಧ ವ್ಯಕ್ತಿಯೋರ್ವನ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ. ಪ್ರಕರಣದಲ್ಲಿ ಮೊಬೈಲ್ ಕಳ್ಳತನವಾಗಿಲ್ಲ. ರೂಪಾ ಅವರೇ ಮೊಬೈಲ್ ಬಿಟ್ಟು ಹೋಗಿದ್ದರು. ಮೇಲಾಗಿ ಒಂದು ದಿನ ವಿಳಂಬವಾಗಿ ರೂಪಾ ದೂರು ದಾಖಲಿಸಿದ್ದರು. ಅವರು ಐಪಿಎಸ್ ಅಧಿಕಾರಿಯಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಒಂದು ದಿನ ವಿಳಂಬವಾಗಿ ಪ್ರಕರಣ ದಾಖಲಿಸಿದರೆ ಹೇಗೆ ಎಂದಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ಡಿಐಜಿ ರೂಪಾ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ: ಅ.21, 2018 ರಂದು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಡಿ. ರೂಪಾ ಮೊಬೈಲ್ ಕಳೆದುಕೊಂಡಿದ್ದರು. ನಂತರ ಅ.22 ರಂದು ಇಮೇಲ್ ಮೂಲಕ ಬಿಡದಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ಬಿಡದಿ ಪೊಲೀಸರು ಮೊಬೈಲ್ ಪತ್ತೆಹಚ್ಚಿದ್ದರು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ರಾಮಪ್ಪ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ, ಅರ್ಜಿ ವಿಚಾರಣೆ ನಡೆಸಿತು.







