ಬರ ಪರಿಹಾರ ಬಿಡುಗಡೆ ಕೇಂದ್ರ ಸರಕಾರದ ತಾರತಮ್ಯ ನೀತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ

ಬೆಂಗಳೂರು, ಜ. 30: ಬರ ಪರಿಹಾರ ಕಾರ್ಯಕ್ಕೆ ಕೇಂದ್ರ ಹಣ ಬಿಡುಗಡೆ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ 900ಕೋಟಿ ರೂ. ಪರಿಹಾರದ ಮೊತ್ತ ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ.ಬಿಡುಗಡೆ ಮಾಡಿರುವುದು ನಿರಾಸೆ ಮೂಡಿಸಿದೆ ಎಂದು ಆಕ್ಷೇಪಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ಉದ್ದೇಶದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬರ ಪರಿಹಾರ ಕಾರ್ಯಕ್ಕೆ ಹೆಚ್ಚಿನ ಮೊತ್ತ ಪರಿಹಾರ ಧನವನ್ನು ಕೇಂದ್ರ ಮಾಡಿರುವ ಸಾಧ್ಯತೆಗಳಿವೆ ಎಂದು ಕುಮಾರಸ್ವಾಮಿ ಟೀಕಿಸಿದರು. ರಾಜ್ಯಕ್ಕೆ 2,500 ಕೋಟಿ ರೂ.ನೆರವು ಕೋರಲಾಗಿತ್ತು. ಕೇಂದ್ರದ ಅಧ್ಯಯನ ತಂಡಗಳು ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ವರದಿಯನ್ನೂ ನೀಡಿತ್ತು. ಆದರೆ, ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಹಣ ತೃಪ್ತಿ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೌನಾಚರಣೆ: ಹುತಾತ್ಮರ ದಿನಾಚರಣೆ ಅಂಗವಾಗಿ ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂಭಾಗದಲ್ಲಿ ಸಚಿವಾಲಯ ಸಿಬ್ಬಂದಿ ಮತ್ತು ಅಧಿಕಾರಿಗಳು ಒಂದು ನಿಮಿಷ ಮೌನಾಚರಣೆ ಮಾಡಿದರು. ಈ ವೇಳೆ ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವ ಸಾ.ರಾ.ಮಹೇಶ್, ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.





