ಜನಪ್ರತಿನಿಧಿ, ಅಧಿಕಾರಿಗಳ ಸ್ವಾರ್ಥಕ್ಕೆ ಕನ್ನಡ ನಶಿಸುತ್ತಿದೆ: ತಿಮ್ಮಯ್ಯ
ಬೆಂಗಳೂರು, ಜ.30: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸ್ವಾರ್ಥದಿಂದಾಗಿ ಕನ್ನಡ ನಶಿಸುವ ಹಂತಕ್ಕೆ ತಲುಪುತ್ತಿದೆ ಎಂದು ರಾಜ್ಯ ಕೈಗಾರಿಕೆ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.
ಬುಧವಾರ ಅನಕೃ ಕನ್ನಡ ಸಂಘ ನಗರದ ಶೇಷಾದ್ರಿಪುರ ಪ್ರೌಢಶಾಲೆಯ ಶಿಕ್ಷಣದತ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ ಮತ್ತು ಕುವೆಂಪು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳಿಗೆ ಕನ್ನಡ ನೆಲದ ವಾಸ್ತವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೋಗುವುದಿಲ್ಲ. ಕೇವಲ ಚುನಾವಣೆ ಪ್ರಚಾರಕ್ಕಾಗಿ ತಮ್ಮ ತೋಚಿದಂತೆ ಹೇಳುತ್ತಾರೆ ಎಂದು ವಿಷಾದಿಸಿದರು.
ಜನಪ್ರತಿನಿಧಿ, ಅಧಿಕಾರಿಶಾಹಿಗಳ ಹೊರತಾಗಿ ಜನಸಾಮಾನ್ಯರು, ಕನ್ನಡಪರ ಸಂಘಟನೆಗಳು ಕನ್ನಡದ ನೆಲದ ಸಮಸ್ಯೆಗಳನ್ನು ವಿವಿಧ ಕೋನದಿಂದ ಅಧ್ಯಯನ ಮಾಡಬೇಕು. ಸಮಸ್ಯೆಗಳಿಗೆ ಮೂಲಕಾರಣವನ್ನು ಹುಡುಕಿ, ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಕರ್ನಾಟಕ ಜನಶಕ್ತಿಯ ಸಿ.ಕೆ.ರಾಮೇಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳ ಮಧ್ಯೆ ಧ್ವೇಷ ಬಿತ್ತುವಂತಹ ಕೆಲಸ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅವರಿಬ್ಬರಲ್ಲಿರುವ ಸದ್ವಿಚಾರಗಳನ್ನು ಈಗಿನ ಯುವ ತಲೆಮಾರಿಗೆ ತಲುಪಿಸುವಂತಹ ಕೆಲಸವನ್ನಷ್ಟೆ ಮಾಡಬೇಕೆಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಕೇವಲ ಸ್ವಾತಂತ್ರ ಹೋರಾಟಗಾರ, ರಾಜಕಾರಣಿ ಮಾತ್ರ ಆಗಿರಲಿಲ್ಲ. ಅವರೊಬ್ಬ ಕೃಷಿಕರೂ ಆಗಿದ್ದರು. ಒಂದು ಎಕರೆಯಲ್ಲಿ ಗುಲಾಬಿ ನೆಟ್ಟು, ಪ್ರೀತಿಯ ಸಂಕೇತವಾಗಿ ಎಲ್ಲರಿಗೂ ನೀಡುತ್ತಿದ್ದರು. ಇಂತಹ ಮಹಾನ್ ಮಾನವತಾವಾಧಿಯ ವಿಚಾರಗಳನ್ನು ಯುವ ಜನತೆ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಆಶಿಸಿದರು.
ಕನ್ನಡಪರ ಹೋರಾಟಗಾರ ಎಸ್.ರಾಮಲಿಂಗೇಶ್ವರ ಮಾತನಾಡಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ರಾಷ್ಟ್ರಕವಿ ಕುವೆಂಪುರವರ ಆಶಯವಾಗಿತ್ತು. ಆದರೆ, ಇಂದಿನ ಅಭಿವೃದ್ಧಿ ಕಲ್ಪನೆಗಳು ಕೇವಲ ಹಣವಂತರಿಗಾಗಿ ರೂಪಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇವತ್ತು ಎಲ್ಲೆಲ್ಲೂ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಕೃಷಿಯ ಜಾಗದಲ್ಲಿ ಬಡಾವಣೆ ನಿರ್ಮಿಸುವುದೆ ಸರಕಾರದ ಬಹುಮುಖ್ಯವಾದ ಭಾಗವಾಗಿದೆ. ಇದರಿಂದ ಈ ದೇಶದ ಬಡವರಿಗೆ ಇಲ್ಲವೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಏನಾದರು ಪ್ರಯೋಜನವಿದೆಯೆ. ಇಂತಹ ವಿಚಾರಗಳನ್ನು ಯುವ ಜನತೆ ಅರ್ಥ ಮಾಡಿಕೊಂಡು ಪ್ರಶ್ನಿಸುವಂತರಾಗಬೇಕು ಎಂದು ಅವರು ಹೇಳಿದರು. ಈ ವೇಳೆ ಹಿರಿಯ ಪತ್ರಕರ್ತ ರು.ಬಸಪ್ಪ ಉಪಸ್ಥಿತರಿದ್ದರು.







