ಬೆಂಗಳೂರು: 200 ರೋಗಿಗಳಿಗೆ ಯಶಸ್ವಿ ಲಿವರ್ ಕಸಿ
ಬೆಂಗಳೂರು, ಜ. 30: ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ 9 ವರ್ಷಗಳಲ್ಲಿ 200 ಯಶಸ್ವಿ ಯಕೃತ್(ಲಿವರ್) ಕಸಿ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಆಸ್ಪತ್ರೆ ಪ್ರತಿ ತಿಂಗಳು ಸರಾಸರಿ 2-3 ಕಸಿ ಶಸ್ತ್ರಚಿಕಿತ್ಸೆ ಮಾಡುತ್ತಿದೆ. ಅಲ್ಲದೆ, ಆಸ್ಪತ್ರೆಯ ತಜ್ಞ ವೈದ್ಯರು ಬಹು ಅಂಗಾಂಗ ಕಸಿ ಮಾಡಿದ್ದು, ಹೆಚ್ಚು ಬಹು ಅಂಗಾಂಗ ಕಸಿ ಮಾಡುತ್ತಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಆಸ್ಪತ್ರೆಯ ತಂಡದ ಸಾಂಘಿಕ ಪ್ರಯತ್ನದ ಫಲವಾಗಿ ದಾನಿಗಳು ಇದೇ ಆಸ್ಪತ್ರೆಗೆ ಅತಿ ಹೆಚ್ಚು ಲಿವರ್ ಕಸಿಗಾಗಿ ಲಿವರ್ ದಾನ ಮಾಡಿದ್ದಾರೆ. 2018ರಲ್ಲಿ ತಜ್ಞ ವೈದ್ಯರ ತಂಡ 29 ಅಂಗಾಂಗಗಳನ್ನು ಕಸಿ ಮಾಡಿದ್ದು, ಇದರಲ್ಲಿ 14 ಲಿವರ್ ಕಸಿ ಮಾಡಿದ್ದು, ಶೇ.93ರಷ್ಟು ಯಶಸ್ವಿ ಸಾಧಿಸಿದೆ.
ಯುರಿನರಿ ಬ್ಲಾಡರ್ ಟ್ಯುಬರ್‌ಕ್ಯುಲೋಸಿಸ್‌ನಿಂದ ಬಳಲುತ್ತಿದ್ದ 26 ವರ್ಷದ ಯುವಕ ತುಂಬಾ ಸಂಕೀರ್ಣತೆಯ ರೋಗದಿಂದ ಬಳಲುತ್ತಿದ್ದರು. ಅವರಿಗೆ ಅವರ ಸಂಬಂಧಿ ಲಿವರ್ ಕೊಡಲು ಮುಂದೆ ಬಂದರು. 2018ರ ಆರಂಭದಲ್ಲಿ ಯಾವುದೇ ತೊಂದರೆ ಇಲ್ಲದೇ ಲಿವರ್ ಕಸಿ ನಡೆಯಿತು ಎಂದು ಆಸ್ಪತ್ರೆ ಹೇಳಿದೆ.
ಜಾಗೃತಿ ಅಗತ್ಯ: ಅಂಗಾಂಗ ದಾನ ಮತ್ತು ಶವ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ರೋಗಿಗಳನ್ನು ಅಪಾಯದಿಂದ ಪಾರು ಮಾಡಿ ಅವರಿಗೆ ಅಂಗಾಂಗ ಕಸಿಗೆ ತಗಲುವ ವೆಚ್ಚವನ್ನು ಭರಿಸಲು ಆರ್ಥಿಕ ನೆರವು ನೀಡುವಂತೆ ಸಾರ್ವಜನಿಕರಲ್ಲಿ ನಾವು ಮನವಿ ಮಾಡುತ್ತಿದ್ದೇವೆ ಎಂದು ವೈದ್ಯ ಡಾ.ಸಂಜೀವ್ ಗೊವಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







