ಫೆ.2: ಮೂಡಿಗೆರೆಯಲ್ಲಿ ಬ್ಯಾರಿ-ತುಳು ಸಾಂಸ್ಕೃತಿಕ ಸೌಹಾರ್ದ ಸಮ್ಮೇಳನ
ಮಂಗಳೂರು, ಜ.30: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಮೂಡಿಗೆರೆಯ ತುಳುಕೂಟದ ಸಹಯೋಗದೊಂದಿಗೆ ಫೆ.2ರಂದು ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಬ್ಯಾರಿ-ತುಳು ಸಾಂಸ್ಕೃತಿಕ ಸೌಹಾರ್ದ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಅಂದು ಬೆಳಗ್ಗೆ 9:30ರಿಂದ ವೈವಿಧ್ಯಮಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪತ್ರಕರ್ತ ಬಿ.ಎಂ. ಹನೀಫ್ ‘ಸೌಹಾರ್ದತೆಗೆ ಬ್ಯಾರಿ-ತುಳು ಭಾಷೆ ಮತ್ತು ಸಂಸ್ಕೃತಿಯ ಕೊಡುಗೆ’ ಎಂಬ ವಿಷಯದ ಕುರಿತು ಮತ್ತು ನಮ್ಮ ಟಿವಿ ಮಂಗಳೂರು ಮುಖ್ಯಸ್ಥ ಡಾ. ಶಿವಶರಣ ಶೆಟ್ಟಿ ‘ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ’ ಎಂಬ ವಿಷಯದ ಕುರಿತು, ವಿದ್ವಾಂಸ ಪ್ರೊ. ತುಕಾರಾಂ ಪೂಜಾರಿ ‘ತುಳು ಭಾಷೆ ಮತ್ತು ಸಂಸ್ಕೃತಿಯು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಮಧ್ಯಾಹ್ನ 12ಗಂಟೆಗೆ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಬ್ಯಾರಿ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಹಸನಬ್ಬ ಮೂಡುಬಿದ್ರೆ, ಆಯಿಶಾ ಯು.ಕೆ, ಮರಿಯಂ ಇಸ್ಮಾಯೀಲ್, ಅಲ್ತಾಫ್ ಬಿಳಗುಳ ಭಾಗವಹಿಸಲಿದ್ದು, ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸುವರು.
ಬಳಿಕ ಅಶ್ರಫ್ ಅಪೊಲೊ ಮತ್ತು ರಯೀಸ್ ಬಳಗದಿಂದ ಬ್ಯಾರಿ ಹಾಡುಗಳು ಮತ್ತು ಬ್ಯಾರಿ ಒಪ್ಪನೆ, ಕೊಂಕಣಿ ಸಾಂಸ್ಕೃತಿಕ ನೃತ್ಯ ವೈವಿಧ್ಯ, ಬ್ಯಾರಿ ದಫ್ ಮತ್ತು ಬ್ಯಾರಿ ಹಾಡುಗಳು, ‘ಬಲೆ ತೆಲಿಪುಲೆ’ ತುಳು ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ಭಾರತೀಯ ತ್ರೋಬಾಲ್ ತಂಡದ ನಾಯಕಿ ಗಾನ ಗೌಡ ಬಸನಿ, ಸಾಹಿತಿ ಡಾ. ಡಿ.ಎಸ್.ಜಯಪ್ಪಗೌಡ, ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್. ಕುಮಾರ್, ನಿವೃತ್ತ ಮುಖ್ಯ ಶಿಕ್ಷಕ ಎನ್. ಡಿಸೋಜ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.







