ಮುಂಬರುವ ಚುನಾವಣೆಯಲ್ಲಿ ಎನ್ಡಿಎಗೆ ಇಲ್ಲ ಬಹುಮತ: ಟೈಮ್ಸ್ ನೌ ಸಮೀಕ್ಷೆ
![ಮುಂಬರುವ ಚುನಾವಣೆಯಲ್ಲಿ ಎನ್ಡಿಎಗೆ ಇಲ್ಲ ಬಹುಮತ: ಟೈಮ್ಸ್ ನೌ ಸಮೀಕ್ಷೆ ಮುಂಬರುವ ಚುನಾವಣೆಯಲ್ಲಿ ಎನ್ಡಿಎಗೆ ಇಲ್ಲ ಬಹುಮತ: ಟೈಮ್ಸ್ ನೌ ಸಮೀಕ್ಷೆ](https://www.varthabharati.in/sites/default/files/images/articles/2019/01/31/175528.gif)
ಹೊಸದಿಲ್ಲಿ, ಜ.31: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎಗೆ ಬಹುಮತ ದೊರಕುವ ಸಾಧ್ಯತೆ ಇಲ್ಲ ಎನ್ನುವ ಅಂಶ ಟೈಮ್ಸ್ ನೌ ಸಮೀಕ್ಷೆಯಿಂದ ವ್ಯಕ್ತವಾಗಿದೆ.
ಎನ್ಡಿಎ ಮೈತ್ರಿಕೂಟ 252 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎಗೆ 146 ಸ್ಥಾನ ಲಭಿಸಲಿದ್ದು, ಯಾವುದೇ ರಂಗದ ಜತೆ ಗುರುತಿಸಿಕೊಳ್ಳದ ಪಕ್ಷಗಳು 145 ಸ್ಥಾನಗಳನ್ನು ಗೆಲ್ಲಲಿವೆ ಎಂದು ಸಮೀಕ್ಷೆ ಅಂದಾಜಿಸಿದೆ.
ಅಲಿಪ್ತ ಪಕ್ಷಗಳ ಪೈಕಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ 51 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ತೃಣಮೂಲ ಕಾಂಗ್ರೆಸ್ 32, ಜಗನ್ ಮೋಹನ್ ರೆಡ್ಡಿಯವರ ವೈಎಸ್ಆರ್ ಕಾಂಗ್ರೆಸ್ 23 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಇಷ್ಟಾಗಿಯೂ ಎನ್ಡಿಎ ಬಹುಮತ ಗಳಿಸಲು 20 ಸ್ಥಾನಗಳ ಕೊರತೆಯನ್ನಷ್ಟೇ ಅನುಭವಿಸಿದರೆ, ಯಾವ ಪಕ್ಷವೂ ಕಿಂಗ್ಮೇಕರ್ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಗೆ ಸಾಕಷ್ಟು ಆಯ್ಕೆಗಳು ಇರುತ್ತವೆ ಎಂದು ಅಭಿಪ್ರಾಯಪಟ್ಟಿದೆ.
2014ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 336 ಸ್ಥಾನಗಳನ್ನು ಗೆದ್ದರೆ ಯುಪಿಎ ಕೇವಲ 60 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಅಂದರೆ ಈ ಬಾರಿ ಯುಪಿಎ 86 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿದೆ. ಎನ್ಡಿಎ 84 ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಐದು ವರ್ಷಗಳ ಹಿಂದೆ ಎರಡೂ ರಂಗಗಳ ನಡುವೆ ದೊಡ್ಡ ಅಂತರ ಇರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನೇತೃತ್ವದ ಕೂಟ ಅಧಿಕಾರ ಗಳಿಸುವ ಸಾಧ್ಯತೆ ವಿರಳ ಎಂದು ಸಮೀಕ್ಷೆ ಹೇಳಿದೆ.