ಆನ್ ಲೈನ್ ನಲ್ಲಿ ಮಿಲಿಯಗಟ್ಟಲೆ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಗೆ ರಕ್ಷಣೆ ನೀಡದ ಎಸ್ಬಿಐ : ವರದಿ
![ಆನ್ ಲೈನ್ ನಲ್ಲಿ ಮಿಲಿಯಗಟ್ಟಲೆ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಗೆ ರಕ್ಷಣೆ ನೀಡದ ಎಸ್ಬಿಐ : ವರದಿ ಆನ್ ಲೈನ್ ನಲ್ಲಿ ಮಿಲಿಯಗಟ್ಟಲೆ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಗೆ ರಕ್ಷಣೆ ನೀಡದ ಎಸ್ಬಿಐ : ವರದಿ](https://www.varthabharati.in/sites/default/files/images/articles/2019/01/31/175548.jpg)
ಹೊಸದಿಲ್ಲಿ,ಜ.31: ತನ್ನ ಗ್ರಾಹಕರ ಬ್ಯಾಂಕಿಂಗ್ ಮಾಹಿತಿಗಳಿರುವ ಸರ್ವರ್ ಒಂದಕ್ಕೆ ಸೂಕ್ತ ಭದ್ರತೆಯೊದಗಿಸದೆ ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಹಾಗೂ 42 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಲಕ್ಷಗಟ್ಟಲೆ ಗ್ರಾಹಕರ ಮಾಹಿತಿಗಳನ್ನು ಅಪಾಯಕ್ಕೊಡ್ಡಿತ್ತು ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಆ ನಿರ್ದಿಷ್ಟ ಸರ್ವರ್ ಭದ್ರತೆಗೆ ಬ್ಯಾಂಕ್ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
‘ಟೆಕ್ ಕ್ರಂಚ್’ ವರದಿಯ ಪ್ರಕಾರ ಬ್ಯಾಂಕಿನ ಅಸಂರಕ್ಷಿತ ಸರ್ವರ್ ಮುಂಬೈ ಡಾಟಾ ಕೇಂದ್ರದಲ್ಲಿತ್ತು ಹಾಗೂ ಎಸ್ಬಿಐ ಕ್ವಿಕ್ ಎಂಬ ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆಗಳ ಸಂಸ್ಥೆಯ ಮಾಹಿತಿ ಅದರಲ್ಲಿತ್ತು. ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಖಾತೆಗಳ ವಿವರಗಳು, ಮಿನಿ ಸ್ಟೇಟ್ಮೆಂಟ್, ಚೆಕ್ ಪುಸ್ತಕಕ್ಕೆ ಮನವಿ ಹೀಗೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಮೂಲಗಳ ಪ್ರಕಾರ ಈ ಸರ್ವರ್ ಗೆ ಯಾವುದೇ ಪಾಸ್ವರ್ಡ್ ಪ್ರೊಟೆಕ್ಷನ್ ಇರಲಿಲ್ಲವೆನ್ನಲಾಗಿದ್ದು ಲಕ್ಷಗಟ್ಟಲೆ ಗ್ರಾಹಕರ ಬ್ಯಾಂಕಿಂಗ್ ಡಾಟಾ, ಮೊಬೈಲ್ ಸಂಖ್ಯೆ, ಭಾಗಶಃ ಖಾತೆ ಸಂಖ್ಯೆ, ಅಕೌಂಟ್ ಬ್ಯಾಲೆನ್ಸ್, ಇತ್ತೀಚಿಗಿನ ಅವರ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿ ಅಪಾಯದಲ್ಲಿತ್ತು. ಈ ಸೋರಿಕೆಯನ್ನು ಸೆಕ್ಯುರಿಟಿ ಸಂಶೋಧಕರೊಬ್ಬರು ಪತ್ತೆ ಹಚ್ಚಿದ್ದರೆನ್ನಲಾಗಿದ್ದು ಅವರ ಹೆಸರನ್ನು ಬಹಿರಂಗ ಪಡಿಸಲು ಅವರು ಇಚ್ಛಿಸಿಲ್ಲ.
ಎಸ್ಬಿಐ ಕ್ವಿಕ್ ಸರ್ವಿಸ್ ಸರ್ವರ್ ನಲ್ಲಿ ಗ್ರಾಹಕರ ಮನವಿಗೆ ಸ್ಪಂಧಿಸಿ ಬ್ಯಾಂಕ್ ಕಳುಹಿಸಿದ ಲಕ್ಷಗಟ್ಟಲೆ ಸಂದೇಶಗಳಿದ್ದವು. ಸರ್ವರ್ ಗೆ ಯಾವುದೇ ಭದ್ರತೆಯಿಲ್ಲ ಎಂದು ತಿಳಿದ ಟೆಕ್ ಕ್ರಂಚ್, ಭಾರತ ಮೂಲದ ಸೆಕ್ಯುರಿಟಿ ತಜ್ಞರನ್ನು ಸಂಪರ್ಕಿಸಿ ಎಸ್ಬಿಐ ಕ್ವಿಕ್ ಸರ್ವಿಸ್ ಸೇವೆ ಬಳಸುವಂತೆ ಹೇಳಿದ್ದು ಇದಾದ ಕೂಡಲೇ ಅವರು ತಜ್ಞರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಕಳುಹಿಸಿದ ಸಂದೇಶವನ್ನು ಪಾಸ್ವರ್ಡ್ ಪ್ರೊಟೆಕ್ಷನ್ ಇಲ್ಲದ ಸರ್ವರ್ ನಲ್ಲಿ ನೋಡಿದ್ದರು.
‘ಟೆಕ್ ಕ್ರಂಚ್’ ಪ್ರಕಾರ ಈ ಕ್ವಿಕ್ ಸರ್ವಿಸ್ ಮೂಲಕ ಸೋಮವಾರ ಒಂದು ದಿನದಲ್ಲೇ ಬ್ಯಾಂಕ್ 30 ಲಕ್ಷಕ್ಕೂ ಅಧಿಕ ಟೆಕ್ಸ್ಟ್ ಸಂದೇಶ ಕಳುಹಿಸಿದ್ದು ಎರಡು ತಿಂಗಳಲ್ಲಿ ಅದೆಷ್ಟು ಸಂದೇಶಗಳನ್ನು ಕಳುಹಿಸಿರಬಹುದು ಎಂದು ಇದರಿಂದ ಅಂದಾಜಿಸಬಹುದಾಗಿದೆ.