ಕೇರಳ ಮುಂಗಡಪತ್ರ ಮಂಡನೆ: ಶಬರಿಮಲೆ ದೇವಸ್ಥಾನಕ್ಕಾಗಿ ಟಿಡಿಬಿಗೆ 100 ಕೋ.ರೂ.
ತಿರುವನಂತಪುರ,ಜ.31: ಕೇರಳ ಸರಕಾರವು 2019-20ನೇ ಸಾಲಿನ ತನ್ನ ಮುಂಗಡಪತ್ರವನ್ನು ಗುರುವಾರ ಮಂಡಿಸಿದ್ದು,ಇತ್ತೀಚಿನ ನೆರೆಹಾವಳಿ ಮತ್ತು ಮಹಿಳೆಯರ ಪ್ರವೇಶದ ವಿರುದ್ಧ ಪ್ರತಿಭಟನೆಗಳಿಂದಾಗಿ ಆದಾಯದಲ್ಲಿ ಹಿಂದೆಂದೂ ಕಂಡಿರದ ಕುಸಿತವನ್ನು ಎದುರಿಸುತ್ತಿರುವ ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಗೆ 100 ಕೋ.ರೂ.ಗಳನ್ನು ಒದಗಿಸಲಾಗಿದೆ.
ಮುಂಗಡಪತ್ರವನ್ನು ಮಂಡಿಸಿದ ಹಣಕಾಸು ಸಚಿವ ಟಿ.ಎಂ.ಥಾಮಸ್ ಐಸಾಕ್ ಅವರು,ಸರಕಾರವು ಶಬರಿಮಲೆ ಶ್ರೀಅಯ್ಯಪ್ಪ ದೇವಸ್ಥಾನದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಕೆಲವು ರಾಜಕಾರಣಿಗಳ ಅಪಪ್ರಚಾರವನ್ನು ಖಂಡಿಸಿದರು.
ಭಕ್ತಾದಿಗಳನ್ನು ಕಾಣಿಕೆಗಳನ್ನು ಸಲ್ಲಿಸುವುದರಿಂದ ವಿಮುಖಗೊಳಿಸುವ ಮೂಲಕ ಮಂಡಳಿಯನ್ನು ಅಸ್ಥಿರಗೊಳಿಸಲು ಯಾರಿಗೂ ಸರಕಾರವು ಅವಕಾಶವನ್ನು ನೀಡುವುದಿಲ್ಲ ಎಂದು ಹೇಳಿದ ಅವರು,ಟಿಡಿಬಿಗಾಗಿ 100 ಕೋ.ರೂ.ಗಳನ್ನು ಮುಂಗಡಪತ್ರದಲ್ಲಿ ಮೀಸಲಿರಿಸಲಾಗಿದೆ ಎಂದರು. ಸರಕಾರವು ಶಬರಿಮಲೆ ದೇವಸ್ಥಾನದ ಒಂದೇ ಒಂದು ಪೈಸೆಯನ್ನೂ ಬಳಸಿಕೊಳ್ಳುವುದಿಲ್ಲ ಎಂದರು.
ಮುಂಗಡಪತ್ರದಲ್ಲಿ ಮಲಬಾರ್ ಮತ್ತು ಕೊಚ್ಚಿನ್ ದೇವಸ್ವಂ ಮಂಡಳಿಗಳಿಗೂ 36 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತಿರುಪತಿಯ ಮಾದರಿಯಲ್ಲಿ ಶಬರಿಮಲೆಯಲ್ಲಿ ಭಕ್ತಾದಿಗಳಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಗುರಿಯಾಗಿದೆ ಎಂದ ಸಚಿವರು,ಶಬರಿಮಲೆ ಮೂಲಶಿಬಿರಗಳಾದ ನೀಲಕ್ಕಲ್ ಮತ್ತು ಪಂಬಾಗಳಲ್ಲಿ ಹಾಗೂ ಪ್ರಮುಖ ಮಧ್ಯಂತರ ಆಶ್ರಯ ತಾಣಗಳಲ್ಲಿ ಆಧುನಿಕ ಸೌಲಭ್ಯಗಳನ್ನೊದಗಿಸಲು ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯು 145.75 ಕೋಟಿ ರೂ.ವೆಚ್ಚದಲ್ಲಿ ಯೋಜನೆಗಳನ್ನು ಅನುಷ್ಠಾನಿಸುತ್ತಿದೆ. ಪಂಬಾದಲ್ಲಿ 10 ಮಿಲಿಯನ್ ಲೀಟರ್ ಸಂಸ್ಕರಣೆ ಸಾಮರ್ಥ್ಯದ ಒಳಚರಂಡಿ ಸಂಸ್ಕರಣೆ ಘಟಕಕ್ಕಾಗಿ 39.59 ಕೋ.ರೂ.ಗಳನ್ನು ಮುಂಗಡಪತ್ರದಲ್ಲಿ ಒದಗಿಸಲಾಗಿದೆ. ಶಬರಿಮಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಈ ಸಾಲಿಗೆ 200 ಕೋ.ರೂ.ಹೆಚ್ಚುವರಿ ಮಂಜೂರಾತಿಯ ಜೊತೆಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸೌಕರ್ಯಗಳ ನಿರ್ಮಾಣಕ್ಕಾಗಿ 102.16 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.