‘ವಿಶೇಷಚೇತನರಿಗೆ ಶೇ.50ರಷ್ಟು ರಿಯಾಯಿತಿ’
ಬೆಂಗಳೂರು, ಜ.31: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ವಿಶೇಷಚೇತನ ನಾಗರಿಕರ ಅವಶ್ಯಕತೆಗಳನ್ನು ಬೆಂಬಲಿಸುವ ಹಾಗೂ ಅನುಕೂಲ ಮಾಡಿಕೊಡುವ ಸಲುವಾಗಿ ಎಲ್ಲ ಮಯೂರ ಹೊಟೇಲ್‌ಗಳಲ್ಲಿ ವಾಸ್ತವ್ಯ ಮಾಡುವ ವಿಶೇಷಚೇತನ ನಾಗರಿಕರಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ.
ಮಯೂರ ಹೊಟೇಲ್‌ಗಳಲ್ಲಿ ವಾಸ್ತವ್ಯಕ್ಕೆ ಶೇ.50ರಷ್ಟು ರಿಯಾಯಿತಿ ನೀಡುತ್ತಿದ್ದರೆ, ಉಪಾಹಾರ ಗೃಹಗಳಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗಾಗಿ ಗಾಲಿ ಕುರ್ಚಿ(ವೀಲ್‌ಚೇರ್) ವ್ಯವಸ್ಥೆಯನ್ನು ಮಾಡಲಾಗಿದೆ.
ಒಬ್ಬ ವಿಶೇಷಚೇತನ ವ್ಯಕ್ತಿಗೆ ಒಂದು ಕೊಠಡಿ ಮಾತ್ರ ಸೀಮಿತವಾಗಿದ್ದು, ಅವರೊಂದಿಗೆ ಮತ್ತೊಬ್ಬರನ್ನು ಜೊತೆಯಾಗಿ ಕರೆದುಕೊಂಡು ಬರಲು ಅವಕಾಶವಿದೆ. ನಿಗಮದ ಎಲ್ಲ ಹೊಟೇಲ್ ಘಟಕಗಳು ಸೌಲಭ್ಯವನ್ನು ಹೊಂದಿರಬೇಕಾದ ಕಾರಣ ಅನುಭವಿ ಹಾಗೂ ವಿಶ್ವಾಸಾರ್ಹ ವೈದ್ಯರ ಜೊತೆ ಈಗಾಗಲೇ ಷರತ್ತನ್ನು ಮಾಡಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಹಂಪಿಯಲ್ಲಿರುವ ನಿಗಮದ ಹೊಟೇಲ್ ಮಯೂರ ಭುವನೇಶ್ವರಿಯಲ್ಲಿ ಈ ಸೌಲಭ್ಯ ಆರಂಭಿಸಲಾಗಿದೆ.
ವಿಶೇಷಚೇತನರಿಗೆ ನೀಡಿರುವ ಸೌಲಭ್ಯಗಳ ಕುರಿತು ಹರ್ಷ ವ್ಯಕ್ತಪಡಿಸಿರುವ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಪ್ರಥಮ ಬಾರಿಗೆ ವಿಶೇಷಚೇತನರಿಗಾಗಿ ಈ ರೀತಿಯ ಸೌಲಭ್ಯವನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ವಿಶೇಷಚೇತನರು ಹಾಗೂ ಇತರೆ ವರ್ಗದ ಪ್ರವಾಸಿಗರಿಗೆ ಮುಂದಿನ ದಿನಗಳಲ್ಲಿ ಹಲವು ವಿಭಿನ್ನ ಹಾಗೂ ವಿಶೇಷ ರಿಯಾಯಿತಿ ಮತ್ತು ಸವಲತ್ತುಗಳನ್ನು ಕೆಎಸ್‌ಟಿಡಿಸಿ ನೀಡಲಿದೆ ಎಂದಿದ್ದಾರೆ.
ಈ ಕೊಡುಗೆಗಳು ಫೆಬ್ರವರಿ 1ರಿಂದ ಕೆಎಸ್‌ಟಿಡಿಸಿಯ ಎಲ್ಲ ಮಯೂರ ಹೊಟೇಲ್‌ಗಳಲ್ಲಿ ಚಾಲ್ತಿಗೆ ಬರಲಿದ್ದು, ಈ ಸೌಲಭ್ಯವನ್ನು ಕೆಎಸ್‌ಟಿಡಿಸಿಯ ಬುಕ್ಕಿಂಗ್ ಕೇಂದ್ರದ ದೂರವಾಣಿ ಸಂಖ್ಯೆ: 080-4334 4334 ಮೂಲಕ ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.







