ಬೆಳಗಾವಿ ನಗರಾದ್ಯಂತ ‘ನಮ್ಮ ಮುಖ್ಯಮಂತ್ರಿ ಜಾರಕಿಹೊಳಿ’ ಅಭಿಯಾನ

ಬೆಳಗಾವಿ, ಜ.31: ಮುಂದಿನ ಬಾರಿಗೆ ನಮ್ಮ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಬೆಳಗಾವಿ ನಗರಾದ್ಯಂತ ಪೋಸ್ಟರ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ.
ಕೆಲ ದಿನಗಳ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಹತ್ತು ವರ್ಷಗಳ ನಂತರ ನಾನು ಮುಖ್ಯಮಂತ್ರಿ ಅಭ್ಯರ್ಥಿ ಪಟ್ಟಿಯಲ್ಲಿ ಇರುತ್ತೇನೆಂದು ತಿಳಿಸಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಸತೀಶ್ ಜಾರಕಿಹೊಳಿಯನ್ನ ಮುಖ್ಯಮಂತ್ರಿ ಮಾಡೋವರೆಗೆ ವಿರಮಿಸುವುದಿಲ್ಲವೆಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದರ ಜೊತೆಗೆ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ತಪ್ಪೇನಿಲ್ಲವೆಂದು ಹೇಳಿದ್ದರು. ಈ ಹೇಳಿಕೆಗಳ ಸ್ಫೂರ್ತಿಯೊಂದಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಅಹಿಂದ ನಾಯಕ ಎಂದು ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ತಮ್ಮ ಸರಳ ನಡತೆ, ಸಾಮಾಜಿಕ ಕಳಕಳಿಯ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಮೂಢನಂಬಿಕೆ, ಕಂದಾಚಾರದ ವಿರುದ್ಧ ಇಡೀ ರಾಜ್ಯದಲ್ಲಿ ಸಂಘಟಿತ ಹೋರಾಟ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಮುಖಾಂತರ ಸದ್ದಿಲ್ಲದೇ ತಮ್ಮ ಸಂಘಟನೆಯನ್ನ ಆರಂಭಿಸಿದ್ದಾರೆ. ಇಷ್ಟೇ ಅಲ್ಲದೇ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಯಲ್ಲಿ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಇವರ ಅಭಿಮಾನಿಗಳು ನನ್ನ ಮುಖ್ಯಮಂತ್ರಿ ಜಾರಕಿಹೊಳಿ ಎಂಬ ಅಭಿಯಾನ ಆರಂಭಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರಲ್ಲಿ ಇರುಸು ಮುರುಸಿಗೆ ಕಾರಣವಾಗಿದೆ.







