ಪರಿಸರ ಉಳಿಸುವ ಪ್ರಜ್ಞೆ ಮನೆಯಿಂದಲೇ ಆರಂಭಗೊಳ್ಳಲಿ: ಸಿ.ಎಂ.ಜೋಷಿ
ಕಲ್ಯಾಣಪುರ ಡಾ.ಟಿಎಂಎ ಪೈ ಪ್ರೌಢ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ

ಉಡುಪಿ, ಜ.31: ಪರಿಸರವನ್ನು ಉಳಿಸಬೇಕೆಂಬ ಪ್ರಜ್ಞೆ ಪ್ರತಿ ಮನೆಯಿಂದ ಆರಂಭಗೊಳ್ಳಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಂ.ಜೋಷಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ ಇವುಗಳ ಸಹಯೋಗದಲ್ಲಿ ಗುರುವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪರಿಸರವನ್ನು ಹೇಗೆ ಉಳಿಸಬೇಕು, ಬೆಳೆಸಬೇಕೆಂಬ ಪ್ರಜ್ಞೆಯನ್ನು ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಪ್ರಶಂಸಾರ್ಹ. ಆದರೆ ಪರಿಸರ ಉಳಿಸುವ ಪ್ರಯತ್ನ ಕೇವಲ ಶಾಲೆಗಳಿಗೆ ಸೀಮಿತಗೊಳ್ಳಬಾರದು. ಶಾಲೆ ಯಿಂದ ಹೊರಬಂದ ಬಳಿಕವೂ ಇದನ್ನು ಪ್ರತಿ ಮನೆಮನೆಗಳಿಂದಲೂ ಪ್ರಾರಂಭಿಸಬೇಕು ಎಂದು ಜೋಷಿ ಹೇಳಿದರು.
ಮಾನವನ ಯೋಚನಾ ಶಕ್ತಿಯಿಂದ ನೂತನ ಆವಿಷ್ಕಾರಗಳಿಗೆ ಕೊನೆ ಎಂಬುದಿಲ್ಲ. ಕಳೆದ 5-10 ವರ್ಷದಿಂದ ಪರಿಸರ ಸಂರಕ್ಷಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪರಿಸರ ಉಳಿಸುವ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಜೊತೆಗೆ ಜನಸಾಮಾನ್ಯರಿಂದಲೂ ಈ ಕೆಲಸ ವಾಗಬೇಕು.ಪ್ರತಿ ಮನೆಗಳಲ್ಲೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಬೇಕಿದ್ದು, ಪರಿಸರವನ್ನು ಉಳಿಸಲು ಬಹಳ ದೊಡ್ಡ ಪ್ರಮಾಣದ ಕೆಲಸದ ಅಗತ್ಯವಿದೆ. ಪರಿಸರ ನನ್ನದು ಎಂಬ ಮನಸ್ಥಿತಿ ಎಲ್ಲರಲ್ಲಿ ಮೂಡಬೇಕು ಎಂದು ಜಿಲ್ಲಾ ನ್ಯಾಯಾಧೀಶರು ನುಡಿದರು.
ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ವಿ.ಅರವಿಂದ ಹೆಬ್ಬಾರ್ ಈ ಸಂದರ್ಭದಲ್ಲಿ ‘ನಾವು ಸೇವಿಸುವ ಆಹಾರ ಎಷ್ಟು ಸುರಕ್ಷಿತ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಬಿ. ಪುರಾಣಿಕ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಪರಿಸರ ತಜ್ಞ ಆರೂರು ಮಂಜುನಾಥ್ ರಾವ್, ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ.ಕೆ. ರಾಜ್‌ಗೋಪಾಲ್, ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ವೈ.ಭುವನೇಂದ್ರ ರಾವ್, ಪ್ರಭಾಕರ ಮಿತ್ಯಂತ್ತಾಯ ಉಪಸ್ಥಿತರಿದ್ದರು.
ಉಡುಪಿಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಹೆಚ್.ಲಕ್ಷ್ಮೀಕಾಂತ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲ್ಯಾಣಪುರದ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ
ಜಿಲ್ಲಾ ಪರಿಸರ ಮಿತ್ರ ಶಾಲೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 197 ಶಾಲೆಗಳು ಭಾಗವಹಿಸಿದ್ದು, ಇವುಗಳಲ್ಲಿ ಅಂತಿಮ ಸುತ್ತಿಗೆ 30 ಶಾಲೆಗಳನ್ನು ಆಯ್ಕೆ ಮಾಡಲಾಯಿತು. ಈ ಶಾಲೆಗಳಿಗೆ ಆಯ್ಕೆ ಸಮಿತಿಯ ಸದಸ್ಯರು ತೆರಳಿ ಖುದ್ದು ಪರಿಶೀಲನೆ ನಡೆಸಿದ ಬಳಿಕ ಪ್ರಶಸ್ತಿಗೆ 21 ಶಾಲೆಗಳನ್ನು ಆಯ್ಕೆ ಮಾಡಲಾಯಿತು ಎಂದು ದಿನೇಶ್ ಶೆಟ್ಟಿಗಾರ್ ತಿಳಿಸಿದರು.
ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆ ‘ಜಿಲ್ಲಾ ಪರಿಸರ ಮಿತ್ರ ಶಾಲೆ’ ಪ್ರಶಸ್ತಿಯೊಂದಿಗೆ ಶಾಶ್ವತ ಫಲಕ ಹಾಗೂ 30,000 ರೂ.ಗಳ ಗೌರವಧನವನ್ನು ಗೆದ್ದುಕೊಂಡಿತು. ಉಳಿದಂತೆ 10 ಶಾಲೆಗಳಿಗೆ ಹಸಿರು ಶಾಲೆ ಮತ್ತು 10 ಶಾಲೆಗಳಿಗೆ ಹಳದಿ ಶಾಲೆ ಪ್ರಶಸ್ತಿಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು.









